ಮಡಿಕೇರಿ: ಸಂಪಾಜೆ-ಕಾಟಕೇರಿ (Sampaje – Katakeri) 21.6 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ (National Highway) ಡಾಂಬರೀಕರಣ ಕಾಮಗಾರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸೋಮವಾರ ಚಾಲನೆ ನೀಡಿದರು.
ಸಂಪಾಜೆಯ ಗೇಟ್ ಬಳಿ ಚಾಲನೆ ನೀಡಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಸುಮಾರು 14.16 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಸಂಪಾಜೆಯಿಂದ ಸುಂಟಿಕೊಪ್ಪದವರೆಗೆ 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯಬೇಕಿದೆ ಎಂದು ಸಂಸದರು ಮಾಹಿತಿ ನೀಡಿದರು.
ಕುಶಾಲನಗರದಿಂದ (Kushalnagar) ಸಂಪಾಜೆಯವರೆಗೆ ಅಪಘಾತ ವಲಯವನ್ನು ಗುರುತಿಸಲಾಗಿದ್ದು, ಪ್ರಮುಖವಾಗಿ ಬೋಯಿಕೇರಿ ಮತ್ತು ಆನೆಕಾಡು ಬಳಿ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು. ಇದನ್ನೂ ಓದಿ: ಅಂದು ಹೋರಾಡಿದ್ದಕ್ಕೆ ಈಗ ರಾಮಭಕ್ತರನ್ನು ಬಂಧಿಸ್ತಿದ್ದಾರೆ, ನನ್ನನ್ನೂ ಬಂಧಿಸ್ತಾರಾ? – ಆರ್.ಅಶೋಕ್ ಕಿಡಿ
ಕೊಡಗು ಜಿಲ್ಲೆಯ ಕುಶಾಲನಗರದಿಂದ ಸಂಪಾಜೆವರೆಗೆ ಹೆದ್ದಾರಿ ಭಾಗದಲ್ಲಿ ಸುಮಾರು 1.3 ಕಿ.ಮೀ. ಮಳೆ ನೀರು ನಿಲ್ಲುವ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಪ್ರದೇಶವನ್ನು ವಿಸ್ತರಿಸಿ ರಸ್ತೆ ಎತ್ತರೀಕರಣಗೊಳಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಈ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅಂದಾಜು ಪಟ್ಟಿ ಸಲ್ಲಿಸಬೇಕಿದೆ ಎಂದರು. ಇದನ್ನೂ ಓದಿ: ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?
ಹೆದ್ದಾರಿಯಲ್ಲಿ ಎರಡು ಕಡೆ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಹಾಗೆಯೇ 8 ಕಡೆ ಸಣ್ಣಪುಟ್ಟ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಜೋಡುಪಾಲ ಬಳಿ ಹೊಸದಾಗಿ ಸೇತುವೆ ನಿರ್ಮಿಸಲಾಗುವುದು ಎಂದು ಸಂಸದರು ವಿವರಿಸಿದರು. 2018 ರಲ್ಲಿ ಸಂಭವಿಸಿದ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ 19 ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿತ್ತು. 2019 ರಲ್ಲಿಯೂ ಸಹ ಅತಿವೃಷ್ಟಿಯಾದ ಕಾರಣ 21 ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸಂಪಾಜೆ ಗ್ರಾ.ಪಂ.ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಎಚ್.ಗಿರೀಶ್, ಸಹಾಯಕ ಎಂಜಿನಿಯರ್ ಹನುಮಂತ, ಸುಧಾಕರಶೆಟ್ಟಿ ಇತರರು ಇದ್ದರು.