ವಿಕ್ರಂ ಸಿಂಹ ಬಂಧನದ ಹಿಂದೆ ಇದ್ಯಾ ರಾಜಕೀಯ ಷಡ್ಯಂತ್ರ? – ಅಮಾನತಾದ ಅಧಿಕಾರಿಗಳಿಂದಲೇ ಬಂಧನ

Public TV
2 Min Read
BJP MP Pratap Simhas Brother Vikram Simha Granted Bail

– ನನ್ನ ವಿರುದ್ಧ ರಾಜಕೀಯ ಪಿತೂರಿ : ವಿಕ್ರಂ ಸಿಂಹ
– ಷರತ್ತು ವಿಧಿಸದೇ ಜಾಮೀನು ಮಂಜೂರು

ಹಾಸನ: ಮೈಸೂರು ಸಂಸದ ಪ್ರತಾಪ್‌ ಸಿಂಹ (Pratap Simha) ಸಹೋದರ ವಿಕ್ರಂ ಸಿಂಹ (Viram Simha) ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ ಇದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.  ಅಮಾನತಾದ ಅಧಿಕಾರಿಗಳೇ ವಿಕ್ರಂ ಸಿಂಹ  ಅವರನ್ನು ಬಂಧಿಸಿದ್ದರಿಂದ ಈ ಪ್ರಶ್ನೆ ಸೃಷ್ಟಿಯಾಗಿದೆ.

ಹೌದು. ಅಕ್ರಮವಾಗಿ ನೂರಾರು ಮರ (Tree) ಕಡಿಸಿದ ಆರೋಪದ ಮೇಲೆ ಶನಿವಾರ ಬಂಧನಕ್ಕೆ ಒಳಗಾದ ವಿಕ್ರಂ ಸಿಂಹ ಅವರಿಗೆ ಜಾಮೀನು ಸಿಕ್ಕಿದೆ. ಭಾನುವಾರ ಬೇಲೂರಿನ ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ವಿಕ್ರಂ ಸಿಂಹ ಅವರನ್ನು ಪೊಲೀಸರು ಹಾಜರುಪಡಿಸಿದರು.

ಯಾವುದೇ ಷರತ್ತುಗಳನ್ನು ವಿಧಿಸದೇ ವಿಕ್ರಂ ಸಿಂಹಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು. ಈ ಬೆಳವಣಿಗೆಯಿಂದ ವಿಕ್ರಂ ಸಿಂಹ ಬಂಧಿಸಿದ್ದ ಅರಣ್ಯಾಧಿಕಾರಿಗಳು ತೀವ್ರ ಮುಜುಗರಕ್ಕೊಳಗಾದರು. ವಿಕ್ರಂಸಿಂಹ ಪ್ರತಿಕ್ರಿಯಿಸಿ, ನಾನು ತಪ್ಪು ಮಾಡಿಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಖುಷಿ ವ್ಯಕ್ತಪಡಿಸಿದರು. ನಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಪುನರುಚ್ಚರಿಸಿದರು.

ಸಂಸದ ಪ್ರತಾಪ್ ಸಿಂಹ, ತಲೆಮರೆಸಿಕೊಳ್ಳುವ ಯಾವ ಕೆಲಸವನ್ನು ನನ್ನ ತಮ್ಮ ಮಾಡಿಲ್ಲ. ತಲೆಮರೆಸಿಕೊಳ್ಳುವವರು ತಮ್ಮದೇ ಕಾರಲ್ಲಿ ಫೋನ್ ಆನ್ ಮಾಡಿಕೊಂಡು ಬೆಂಗಳೂರಿಗೆ ಹೋಗುವುದಿಲ್ಲ. ಗೌರವಾನ್ವಿತ ನ್ಯಾಯಾಧೀಶರಿಗೆ ಧನ್ಯವಾದ ಎಂದು ಹೇಳಿದರು.  ಇದನ್ನೂ ಓದಿ: ಜ.12 ರಂದು ದೇಶದ ಅತಿ ಉದ್ದದ ಸಮುದ್ರ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಮೋದಿ

 

ಅಮಾನತಾದ ಅಧಿಕಾರಿಗಳಿಂದಲೇ ಬಂಧನ:
ಮರ ಕಡಿದ ಪ್ರಕರಣ ಸರ್ಕಾರದ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ತಹಸೀಲ್ದಾರ್ ವರದಿ ಆಧರಿಸಿ ಡಿಎಫ್‌ಓ, ಎಸಿಎಫ್, ಆರ್‌ಎಫ್‌ಓ, ಡಿ‌ಆರ್‌ಎಫ್‌ಓ ಹಾಗೂ ಓರ್ವ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಇಡೀ ಪ್ರಕರಣದಲ್ಲಿ ವಿಕ್ರಂಸಿಂಹ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಅಮಾನತಾಗಿದ್ದ ಎಸಿಎಫ್ ಪ್ರಭು ಬಿರಾದರ್, ಆರ್‌ಎಫ್‌ಓ ವಿನಯ್‌ಕುಮಾರ್ ವಿಕ್ರಂಸಿಂಹ ಅವರನ್ನು ಬಂಧಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.

ಇದೇ ಅಧಿಕಾರಿಗಳನ್ನು ಅಮಾನತು ಮಾಡಿದ್ದರೂ ಅಧಿಕಾರಿಗಳಿಗೆ ಅಮಾನತಾದ ಬಗ್ಗೆ ಅಧಿಕೃತವಾಗಿ ಯಾವುದೇ ಆದೇಶ ಬಂದಿರಲಿಲ್ಲ.ಈ ಕಾರಣಕ್ಕೆ ಇನ್ನೂ ಅಧಿಕಾರಿಗಳು ಕರ್ತವ್ಯದಲ್ಲಿದ್ದರು. ಇದನ್ನೂ ಗಮನಿಸಿದರೆ ಮೇಲ್ನೋಟಕ್ಕೆ ಅಮಾನತು ಮಾಡಿ ಅಧಿಕಾರಿಗಳಿಗೆ ಆದೇಶ ಜಾರಿ ಮಾಡದೇ ಸರ್ಕಾರ ಕಣ್ಣೊರೆಸುವ ತಂತ್ರ ಮಾಡಿತಾ ಎಂಬ ಅನುಮಾನ ದಟ್ಟವಾಗಿದೆ.

 

ಜಾಮೀನು ಸಿಕ್ಕಿದ್ದು ಹೇಗೆ?
ವಿಕ್ರಂಸಿಂಹ ವಿರುದ್ದ ಫಾರೆಸ್ಟ್ ಕಾಯ್ದೆ ಕಲಂ 33(5), ಕಲಂ (80), ಕಲಂ (77 A), ಕಲಂ (77 G) ಕಲಂ 62 ಅಡಿಯಲ್ಲಿ ರೂಲ್ಸ್ 144 ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು. ಇವು ಜಾಮೀನಿಗೆ ಅರ್ಹವಾಗಿರುವುದರುಂದ  ಆಗಿರುವುದರಿಂದ ನ್ಯಾಯಾಧೀಶರು ಯಾವುದೇ ಷರತ್ತುಗಳನ್ನು ವಿಧಿಸದೇ ಜಾಮೀನು ಮಂಜೂರು ಮಾಡಿದ್ದಾರೆ.

ಶುಂಠಿ ಬೆಳೆಯಲು ಜಮೀನು ಒಪ್ಪಂದ ಮಾಡಿಕೊಂಡಿದ್ದೇ ವಿಕ್ರಂಸಿಂಹ ಅವರಿಗೆ ಮುಳುವಾಗಿದೆ. ಎಫ್‌ಐಆರ್ ಮಾಡದೇ ಹಾಗೂ ಅಮಾನತಾದ ಅಧಿಕಾರಿಗಳೇ ಬಂಧನ ಮಾಡಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಕಾಣದ ಕೈಗಳ ಪ್ರಭಾವ ಇದೆ ಎಂಬ ಆರೋಪ ಬಂದಿದ್ದು ಮುಂದಿನ ದಿನಗಳಲ್ಲಿ ನಡೆಯುವ ಪ್ರಕರಣದ ತನಿಖೆಯಿಂದ ನಿಜಾಂಶ ಹೊರಬೀಳಲಿದೆ.

 

Share This Article