ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

Public TV
2 Min Read
Railway

ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅಯೋಧ್ಯೆಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿ.30) ಸಂಪೂರ್ಣ ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾದ ಅಯೋಧ್ಯಧಾಮ ಜಂಕ್ಷನ್ ರೈಲು ನಿಲ್ದಾಣದ (Railway Station) ಉದ್ಘಾಟನೆ ನೆರವೇರಿಸಿದರು.

ಬಳಿಕ ರೈಲು ನಿಲ್ದಾಣವನ್ನ ಪರಿಶೀಲಿಸಿದ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ 2 ಅಮೃತ್‌ ಭಾರತ್‌ ರೈಲು ಹಾಗೂ 6 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೂ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌, ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ ಪ್ರಮುಖ ಗಣ್ಯರು ಜೊತೆಯಲ್ಲಿದ್ದರು.

ಏರ್‌ಪೋರ್ಟ್ ವ್ಯವಸ್ಥೆಯ ರೈಲ್ವೇ ನಿಲ್ದಾಣದಂತಿರುವ ಅಯೋಧ್ಯಧಾಮ ಜಂಕ್ಷನ್ (Ayodhya Dham Junction) ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ರಾಮ ಮಂದಿರದಿಂದ 2.1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಲಸ ಕಾರ್ಯ ನಡೆದಿದೆ. 10,000 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.

ರೈಲು ನಿಲ್ದಾಣ ಅಭಿವೃದ್ಧಿಗೆ 3 ಪ್ಲಾಟ್‌ ಫಾರಂಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. 3 ಅಂತಸ್ತಿನ ಕಟ್ಟಡ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಆರೈಕೆ ಕೊಠಡಿ, ಫುಡ್ ಪ್ಲಾಜಾ, ಪೂಜಾ ಪರಿಕರ ಅಂಗಡಿಗಳಿವೆ. 2ನೇ ಹಂತದಲ್ಲಿ 480 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ.

ಮೋದಿಗೆ ದಾರಿಯುದ್ಧಕ್ಕೂ ಪುಷ್ಪಾರ್ಚನೆ:
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶಾಲುಹೊದಿಸಿ ಪ್ರಧಾನಿ ಮೋದಿ ಅವರನ್ನ ಸ್ವಾಗತಿಸಿದರು. ರೈಲ್ವೆ ನಿಲ್ದಾಣ ಉದ್ಘಾಟನೆಗೂ ಮುನ್ನ ನಡೆದ ರೋಡ್‌ ಶೋನಲ್ಲಿ ಹಲವು ಅಂಶಗಳು ಗಮನ ಸೆಳೆದವು.

ಮೋದಿ ಬರುವ ದಾರಿಯಲ್ಲಿ ನಿರ್ಮಿಸಲಾಗಿದ್ದ ಸುಮಾರು 40 ವೇದಿಕೆಗಳಲ್ಲಿ 1,400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ನೃತ್ಯಗಳಿಗೆ ಹೆಜ್ಜೆ ಹಾಕಿದರು. ಅಲ್ಲದೇ ಮೋದಿ ಅವರ ಬರುವಿಕೆಗಾಗಿ ಕಾದು ಕುಳಿತಿದ್ದ ಜನರು ರೋಡ್‌ಶೋ ಹಾದಿಯುದ್ಧಕ್ಕೂ ವಿವಿಧ ಹೂಗಳಿಂದ ಮೋದಿಗೆ ಪುಷ್ಪಾರ್ಚನೆ ಮಾಡಿ ಜಯಘೋಷ ಹಾಕಿದರು.

Share This Article