ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ 50,000 ಕೋಟಿ ರೂ. ವಹಿವಾಟು ಸಾಧ್ಯತೆ

Public TV
2 Min Read
Ram Mandir 2

ಅಯೋಧ್ಯೆ (ರಾಮಮಂದಿರ): ರಾಮ ಜನ್ಮಭೂಮಿ ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಜನವರಿ ತಿಂಗಳು ಶ್ರೀರಾಮ ಭಕ್ತರಿಗಷ್ಟೇ ಅಲ್ಲ, ವ್ಯಾಪಾರಸ್ಥರು ಹಾಗೂ ಉದ್ಯಮಿಗಳಿಗೂ ಹಬ್ಬದ ಸಂದರ್ಭ. ರಾಮಮಂದಿರ (Ram Mandir) ಉದ್ಘಾಟನೆಯೊಂದಿಗೆ ಜನವರಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯಲಿದೆ.

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿಯಲ್ಲಿ 50,000 ಕೋಟಿ ರೂ. ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಅಂದಾಜಿಸಿದೆ. ರಾಮಮಂದಿರ ಮತ್ತು ಭಗವಾನ್‌ ರಾಮನಿಗೆ ಸಂಬಂಧಿಸಿದ ಉತ್ಪನ್ನಗಳ ಖರೀದಿ ಹೆಚ್ಚಾಗಲಿದೆ. ಅದಕ್ಕಾಗಿ ಉದ್ಯಮಿಗಳು ಸಹ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ ಎಂದು CAIT ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ಮೋದಿ ಭೇಟಿ- ಶನಿವಾರದ ಕಾರ್ಯಕ್ರಮಗಳೇನು?

ayodhya trade ram mandir

ಈ ಹೆಚ್ಚುವರಿ ವ್ಯಾಪಾರದ ಬೇಡಿಕೆಯನ್ನು ಪೂರೈಸಲು ಎಲ್ಲಾ ರಾಜ್ಯಗಳ ವ್ಯಾಪಾರಿಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ದೊಡ್ಡ ಪ್ರಮಾಣದ ವಿಶೇಷ ಬಟ್ಟೆಯ ಹೂಮಾಲೆಗಳು, ಲಾಕೆಟ್‌ಗಳು, ಕೀ ಚೈನ್‌ಗಳು, ರಾಮ್ ದರ್ಬಾರ್‌ನ ಚಿತ್ರಗಳು, ರಾಮ ಮಂದಿರದ ಮಾದರಿಗಳು, ಭಗವಾನ್ ರಾಮಧ್ವಜ, ಭಗವಾನ್ ರಾಮನ ಅಂಗವಸ್ತ್ರ, ಭಗವಾನ್ ರಾಮನ ಚಿತ್ರವಿರುವ ಫೋಟೋಗಳು.. ಹೀಗೆ ಬಗೆಬಗೆಯ ವಸ್ತುಗಳನ್ನು ಮಾರಾಟ ಮಾಡಲಾಗುವುದು.

ವಿಶೇಷವಾಗಿ ರಾಮಮಂದಿರದ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮಾದರಿಗಳನ್ನು ಹಾರ್ಡ್‌ಬೋರ್ಡ್, ಪೈನ್‌ವುಡ್, ಮರ ಇತ್ಯಾದಿಗಳಿಂದ ವಿವಿಧ ಗಾತ್ರಗಳಲ್ಲಿ ತಯಾರಿಸಲಾಗುತ್ತಿದೆ. ಗಮನಾರ್ಹ ವಿಷಯವೆಂದರೆ, ಇವುಗಳನ್ನು ತಯಾರಿಸುವಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯೋಗವನ್ನು ಪಡೆಯುತ್ತಿದ್ದಾರೆ. ಸ್ಥಳೀಯ ಕುಶಲಕರ್ಮಿಗಳು, ಕಲಾವಿದರು ಮತ್ತು ಕೆಲಸಗಾರರಿಗೆ ಎಲ್ಲಾ ರಾಜ್ಯಗಳಲ್ಲೂ ಉತ್ತಮ ವ್ಯಾಪಾರ ಆಗಲಿದೆ ಎಂದು ಪ್ರವೀಣ್‌ ತಿಳಿಸಿದ್ದಾರೆ. ಇದನ್ನೂ ಓದಿ: ಆ ’84 ಸೆಕೆಂಡ್‌’ ನಡುವೆಯೇ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಯಾಕೆ?

ayodhya market

ಮಣ್ಣಿನ ದೀಪ, ರಂಗೋಲಿ ಬಣ್ಣ, ಅಲಂಕಾರಕ್ಕಾಗಿ ಹೂವು ಮತ್ತು ಮಾರುಕಟ್ಟೆ-ಮನೆಗಳನ್ನು ಬೆಳಗಿಸಲು ವಿದ್ಯುತ್ ಅಲಂಕಾರಿಕ ವಸ್ತುಗಳು ಬೃಹತ್‌ ಪ್ರಮಾಣದ ವ್ಯಾಪಾರ ಪಡೆಯಲು ಸಿದ್ಧವಾಗಿವೆ. ಹೋರ್ಡಿಂಗ್‌, ಪೋಸ್ಟರ್‌, ಬ್ಯಾನರ್‌, ಕರಪತ್ರ, ಸಾಹಿತ್ಯ ಕೃತಿಗಳು, ಸ್ಟಿಕ್ಕರ್‌ಗಳು ಸೇರಿದಂತೆ ದೇಶಾದ್ಯಂತ ಪ್ರಚಾರ ಸಾಮಗ್ರಿಗಳು ಸಹ ಗಣನೀಯ ವ್ಯಾಪಾರ ವಹಿವಾಟಿಗೆ ಸಜ್ಜುಗೊಂಡಿವೆ. ಸೇವಾ ವಲಯವು ದೊಡ್ಡ ವ್ಯಾಪಾರ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಸ್ಥಿತಿಯೊಂದಿಗೆ ಜ.22 ರಂದು ರಾಮಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದಲ್ಲಿ 6,000 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

Share This Article