ಅಯೋಧ್ಯೆ ರಾಮಮಂದಿರ: ಮತ್ತೆ 500 ಕಾರ್ಮಿಕರಿಗೆ ಬುಲಾವ್‌, 4000 ಕಾರ್ಮಿಕರಿಂದ ಹಗಲಿರುಳು ಕೆಲಸ

Public TV
2 Min Read
ram temple

– ದಿನದ 24 ಗಂಟೆ, ಮೂರು ಪಾಳಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ

ಅಯೋಧ್ಯೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆಗೆ ಸಿದ್ಧವಾಗುತ್ತಿರುವ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಕಾರ್ಯ (Ayodhya Ram Mandir) ಸಮರೋಪಾದಿಯಲ್ಲಿ ನಡೆಯುತ್ತಿದೆ. ಮಂದಿರ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ಹೆಚ್ಚುವರಿ 500 ಕಾರ್ಮಿಕರನ್ನು ಕರೆತರಲಾಗಿದೆ.

ram temple work

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 15 ರೊಳಗೆ ಸಂಪೂರ್ಣ ವ್ಯವಸ್ಥೆಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿದೆ. ಇಲ್ಲಿಯವರೆಗೆ 3,500 ಕಾರ್ಮಿಕರು ದೇವಾಲಯದ ನಿರ್ಮಾಣದಲ್ಲಿ ತೊಡಗಿದ್ದರು. ಈಗ 500 ಕಾರ್ಮಿಕರನ್ನು ಹೆಚ್ಚುವರಿಯಾಗಿ ಕರೆತಂದಿದ್ದು, ಕಾರ್ಮಿಕರ ಸಂಖ್ಯೆಯನ್ನು ನಾಲ್ಕು ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ಎರಡು ಪಾಳಿಯಲ್ಲಿ ತಲಾ ಎಂಟು ಗಂಟೆಗಳ ಕಾಲ ಕಾರ್ಮಿಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈಗ 8 ಗಂಟೆಗಳ ಅವಧಿಯ ಮೂರು ಪಾಳಿಯ 24 ಗಂಟೆಯೂ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್

ದಿನದಲ್ಲಿ ಮೂರು ಶಿಫ್ಟ್‌, ತಲಾ 8 ಗಂಟೆ ಕೆಲಸ
ರಾಮಮಂದಿರದ ನೆಲ ಮಹಡಿ ಸಿದ್ಧವಾಗಿದೆ. ಇದರ ಮುಕ್ತಾಯ ಕಾರ್ಯ ಭರದಿಂದ ಸಾಗುತ್ತಿದೆ. ನೆಲ ಮಹಡಿಯಲ್ಲಿ ನೆಲಹಾಸು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ತಳ ಅಂತಸ್ತಿನ ಕಂಬಗಳಲ್ಲಿ ಶಿಲ್ಪ ಕೆತ್ತನೆ ಕಾರ್ಯವೂ ಜನವರಿ 15ರೊಳಗೆ ಪೂರ್ಣಗೊಳ್ಳಬೇಕಿದೆ.

ayodhya ram mandir

ಸಿಂಹಾಸನದ ಕೆಲಸ ಶುರು!
ದೇಗುಲದ ಗರ್ಭಗುಡಿಯಲ್ಲಿ ನಿರ್ಮಿಸಿರುವ ಮೂರು ಅಡಿ ಎತ್ತರ ಹಾಗೂ ಎಂಟು ಅಡಿ ಉದ್ದದ ಸಿಂಹಾಸನ ನಿರ್ಮಾಣ ಕಾರ್ಯವೂ ಆರಂಭವಾಗಿದೆ. ಸಿಂಹಾಸನದ ಮೇಲೆ ತಾಮ್ರದ ಹಾಳೆಯನ್ನು ಹಾಕಲಾಗುತ್ತಿದೆ. ತಾಮ್ರದ ಮೇಲೆ ಚಿನ್ನದ ಪದರವನ್ನು ಲೇಪಿಸಲು ಟ್ರಸ್ಟ್‌ ನಿರ್ಧರಿಸಿದೆ. ಇದನ್ನೂ ಓದಿ: Ayodhya Ram Mandir – ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಕಂಪ್ಲೀಟ್‌ ಲಿಸ್ಟ್‌

ದೆಹಲಿಯ ಆಭರಣ ಮಳಿಗೆಗೆ ಚಿನ್ನದ ಲೇಪನ ಜವಾಬ್ದಾರಿ
ದೇವಾಲಯದ ಮುಖ್ಯದ್ವಾರ ಮತ್ತು ಗರ್ಭಗುಡಿಯ ಸಿಂಹಾಸನವನ್ನು ಚಿನ್ನದಿಂದ ಅಲಂಕರಿಸಲಾಗುವುದು. ದೆಹಲಿಯ ಜ್ಯುವೆಲ್ಲರ್ಸ್ ಕಂಪನಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಜನವರಿ 15ರೊಳಗೆ ರಾಮಲಲ್ಲಾ ಸಿಂಹಾಸನಕ್ಕೆ ಚಿನ್ನ ಲೇಪಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ ಮಾತನಾಡಿ, ಜನವರಿ 15ರೊಳಗೆ ದೇಗುಲದ ಗರಿಷ್ಠ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

Share This Article