– ಕೇಂದ್ರಕ್ಕೆ ಹೋಗಲ್ಲ ಎಂದು ಶಾಸಕರು ಸ್ಪಷ್ಟನೆ
ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎರಡನೇ ಟಿಪ್ಪು ಸುಲ್ತಾನ ಆಗುತ್ತಿದ್ದಾರೆ. ಹಿಜಬ್ ನಿಷೇಧ (Hijab Ban) ಹಿಂತೆಗೆದುಕೊಳ್ಳುವುದು ಸೂಕ್ತ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿಳಿಸಿದ್ದಾರೆ.
ಹಿಜಬ್ ನಿಷೇಧ ವಾಪಸ್ ಪಡೆಯುವ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹಿಜಬ್ ನಿಷೇಧವನ್ನ ಬಿಜೆಪಿ ಮಾಡಿಲ್ಲ. ಶಾಲೆಯಲ್ಲಿ ಸಮಾನತೆ ಇರಲಿ ಅಂತಾ ಬಾಬಾಸಾಹೇಬ್ ಅಂಬೇಡ್ಕರ್ ಒಂದೇ ಸಮವಸ್ತ್ರದ ಕಾಯ್ದೆ ಮಾಡಿದ್ರು. ಈ ರೀತಿ ಅವರವರಿಗೆ ತಿಳಿದಿದ್ದನ್ನ ಅವರು ಧರಿಸಿ ಬರೋದಾದ್ರೆ, ನಾಳೆ ಹಿಂದೂಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಆಗುತ್ತೆ ಎಂದು ಎಚ್ಚರಿಸಿದರು.
ಈ ರೀತಿ ಆದ್ರೆ ಶ್ರೀಮಂತರ ಒಳ್ಳೆಯ ಬಟ್ಟೆ, ಬಂಗಾರ ಹಾಕಿಕೊಂಡು ಬರುತ್ತಾರೆ. ಆಗ ಬಡ ಮಕ್ಕಳಿಗೆ ಹೇಗೆ ಅನಿಸುತ್ತೆ, ಬೇಜಾರಾಗುತ್ತೆ. ಹಿಂದೂಗಳು ಗೋಮಾಂಸ ತಿನ್ನಬಾರದು ಅಂತಾ ಇದೆ, ಅದಕ್ಕೆ ನಾವು ತಿನ್ನಲ್ಲ. ಮುಸ್ಲಿಮರು ಹಂದಿ ತಿನ್ನಬಾರದು ಅಂತಾ ಇದೆ, ಅದಕ್ಕೆ ಅವರು ತಿನ್ನಲ್ಲ. ತಿನ್ನುವುದರ ಬಗ್ಗೆ ಯಾರೂ ಏನೂ ಹೇಳಿಲ್ಲ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ (Loksabha Election) ಹಿನ್ನೆಲೆಯಲ್ಲಿ ಮುಸ್ಲಿಮರ ಪುಷ್ಟೀಕರಣಕ್ಕೆ ಸಿದ್ದರಾಮಯ್ಯ ನಿಂತಿದ್ದಾರೆ. ಲೋಕಸಭೆಯಲ್ಲಿ ಅವರೆಲ್ಲ ಇವರಿಗೆ ಮತ ಚಲಾಯಿಸ್ತಾರೆ ಎಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಾನು ಲೋಕಸಭೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬಾಗಲಕೋಟೆಯಿಂದ ನಾನೇಕೆ ಸ್ಪರ್ಧೆ ಮಾಡಲಿ. ಅಲ್ಲಿ ಹಾಲಿ ಗದ್ದಿಗೌಡ್ರು ಇದ್ದಾರೆ, ಅನೇಕ ಸಮರ್ಥರು ಇದ್ದಾರೆ. ಬೀದರ್‍ನಿಂದ ಕೂಡ ಸ್ಪರ್ಧೆಗೆ ಇಳಿಯಲು ಕೆಲವರು ಮನವಿ ಮಾಡಲು ಬಂದಿದ್ದರು. ಅಲ್ಲೂ ಕೂಡ ಅನೇಕ ಸಮರ್ಥರಿದ್ದಾರೆ. ನಾನು ಇಲ್ಲಿಯೇ ರಾಜ್ಯದಲ್ಲಿಯೇ ಆರಾಮಾಗಿ ಇದ್ದೇನೆ. ಕೇಂದ್ರಕ್ಕೆ ಹೋಗುವ ಅವಶ್ಯಕತೆ ನನಗಿಲ್ಲ ಎಂದು ಸ್ಪಷ್ಟನೆ ನೀಡಿದರು.