ರಾಜ್ಯಕ್ಕೆ ಬರಗಾಲ ಪರಿಹಾರ ಬಿಡುಗಡೆ ವಿಚಾರವಾಗಿ ಡಿ.23ಕ್ಕೆ ಕೇಂದ್ರದ ಸಭೆ: ಕೃಷ್ಣಬೈರೇಗೌಡ

Public TV
2 Min Read
Krishna Byre Gowda

ನವದೆಹಲಿ: ರಾಜ್ಯಕ್ಕೆ ಬರ ಪರಿಹಾರ (Drought Relief Fund) ಬಿಡುಗಡೆಗೊಳಿಸುವ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಅಜುರ್ನ್ ಮುಂಡಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಾಜ್ಯ ಈ ವರ್ಷ ಭೀಕರ ಬರಕ್ಕೆ ತುತ್ತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಸಮಯದಲ್ಲಿ ಅವರಿಗೆ ಪರಿಹಾರ ಧನ ನೀಡಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವಾಗಿ ಕರ್ನಾಟಕದ ಬರ ಪರಿಹಾರ ಮನವಿಯ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಆದಷ್ಟು ಶೀಘ್ರದಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರ ಜೊತೆ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಅಮಿತ್ ಶಾ ಅವರು ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಕಸರತ್ತು; 2-3 ದಿನದಲ್ಲಿ ಹೈಕಮಾಂಡ್ ತೀರ್ಮಾನ‌ ಮಾಡಲಿದೆ: ಸಿದ್ದರಾಮಯ್ಯ

Krishna Byre Gowda 1

ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆಯ ನಿಖರ ಮಾಹಿತಿಯನ್ನು ಅಮಿತ್ ಶಾ ಅವರಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಲಿರುವ ಬರ ಪರಿಹಾರ ಹಣದ ಮೊತ್ತ ಸಣ್ಣ ರೈತರ ಸಂಖ್ಯೆಗೆ ಅನುಗುಣವಾಗಿರುತ್ತದೆ. ರಾಜ್ಯದ ಸಣ್ಣ ರೈತರ ಸಂಖ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಬಳಿ ವಾಸ್ತವ ಅಂಕಿಅಂಶಗಳಿಲ್ಲ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆ ಕೇವಲ 44% ರಷ್ಟು ಮಾತ್ರ. ಬರ ಪರಿಹಾರ ಬಿಡುಗಡೆ ಸಂದರ್ಭದಲ್ಲಿ ಈ ಅಂಕಿಅಂಶವನ್ನು ಪರಿಗಣಿಸಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ. ರಾಜ್ಯದ ಸಣ್ಣ ರೈತರ ವಾಸ್ತವ ಸಂಖ್ಯೆ 70% ರಿಂದ 75% ಇದೆ. ಈ ಬಗ್ಗೆ ರೈತರ ಆಧಾರ್ ಲಿಂಕ್ ಜೊತೆಗಿನ ನಿಖರ ಅಂಕಿಅಂಶವನ್ನು ನೀಡಲಾಗಿದೆ. ಬರ ಪರಿಹಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಅಂಕಿಅಂಶವನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿ, ಕೊಬ್ಬರಿ ಬೆಳೆಯನ್ನು ಕೇಂದ್ರ ಸರ್ಕಾರವೇ ನ್ಯಾಫೆಡ್ ಮುಖಾಂತರ ಖರೀದಿ ಮಾಡಬೇಕು. ರಾಜ್ಯದಲ್ಲಿ ಕೊಬ್ಬರಿ ಬೆಳೆಯುವ ರೈತರು ಅನೇಕರಿದ್ದಾರೆ. ಈಗ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದೆ. ಪರಿಣಾಮ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ನ್ಯಾಫೆಡ್ ಮುಖಾಂತರ ಮಾರುಕಟ್ಟೆಯಿಂದ ನೇರವಾಗಿ ಕೊಬ್ಬರಿ ಖರೀದಿಸಬೇಕು. ಈ ಪ್ರಕ್ರಿಯೆ ತಕ್ಷಣ ಆರಂಭವಾಗಬೇಕು. ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾದರೆ, ಬೆಲೆ ತಂತಾನೆ ನಿಯಂತ್ರಣವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಬರ ಪರಿಹಾರದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಕೃಷಿ ಸಚಿವರೂ ಸಹ ಸದಸ್ಯರಾಗಿದ್ದು, ಕರ್ನಾಟಕಕ್ಕೆ ಶೀಘ್ರ ಪರಿಹಾರ ಹಣ ಬಿಡುಗಡೆ ಮಾಡುವ ಸಂಬಂಧ ಸಭೆಯಲ್ಲಿ ಮಾತನಾಡಲು ಕೋರಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಪತ್ರ ಬರೆದಿದ್ದಾರೆ. ಆ ಪತ್ರವನ್ನು ನಾನೇ ನೇರವಾಗಿ ಅರ್ಜುನ್ ಮುಂಡಾ ಅವರಿಗೆ ನೀಡಿದ್ದೇನೆ. ರೈತರ ಸಂಕಷ್ಟವನ್ನು ಬಗೆಹರಿಸಲು ಮನವಿ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ; ಬೆಂಗಳೂರು, ನೀರಾವರಿ ಯೋಜನೆಗಳಿಗೆ ಅನುಮತಿ & ಹಣಕಾಸು ನೆರವು ಕೋರಿದ ಡಿಸಿಎಂ

Share This Article