ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಲುಕಿ ಎಳೆದೊಯ್ದ ರೈಲು – ಮಹಿಳೆ ಸಾವು

Public TV
1 Min Read
delhi metro

ನವದೆಹಲಿ: ಮೆಟ್ರೋ (Metro) ರೈಲಿನ ಬಾಗಿಲಿಗೆ ಮಹಿಳೆಯೊಬ್ಬರ ಸೀರೆಯ (Saree) ಸೆರಗು ಸಿಲುಕಿಕೊಂಡ ಪರಿಣಾಮ ಮಹಿಳೆ ರೈಲಿನಿಂದ ಎಳೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ದೆಹಲಿಯ (Delhi) ಇಂದರ್‌ಲೋಕ್ (Inderlok) ಮೆಟ್ರೋ ನಿಲ್ದಾಣದಲ್ಲಿ (Metro Station)  ನಡೆದಿದೆ.

ಗುರುವಾರ ಇಂದರ್‌ಲೋಕ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ರೀನಾ (35) ರೈಲಿನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಶನಿವಾರ ಮೃತಪಟ್ಟಿದ್ದಾರೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

delhi metro e1660794468392

ಘಟನೆ ಬಗ್ಗೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಲಿದ್ದಾರೆ ಎಂದು ದೆಹಲಿ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನುಜ್ ದಯಾಲ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮೃತ ಮಹಿಳೆಯ ಸಂಬAಧಿ ವಿಕ್ಕಿ, ರೀನಾ ಅವರು ಪಶ್ಚಿಮ ದೆಹಲಿಯ ನಾಂಗ್ಲೋಯ್‌ನಿಂದ ಮೋಹನ್ ನಗರಕ್ಕೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೈದ್ಯ, ಆರ್ಮಿ ಡಾಕ್ಟರ್‌, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ.. ನಾನಾ ವೇಶ – ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ

ರೀನಾ ಇಂದರ್‌ಲೋಕ್ ಮೆಟ್ರೋ ನಿಲ್ದಾಣಕ್ಕೆ ತಲುಪಿ ರೈಲು ಬದಲಾಯಿಸಲು ಮುಂದಾದಾಗ ಅವರ ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದೆ. ಅವರು ಈ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶನಿವಾರ ಸಂಜೆ ಅವರು ಸಾವನ್ನಪ್ಪಿದ್ದಾರೆ ಎಂದು ವಿಕ್ಕಿ ತಿಳಿಸಿದ್ದಾರೆ.

ರೀನಾ ಪತಿ 7 ವರ್ಷಗಳ ಹಿಂದೆ ನಿಧನರಾಗಿದ್ದು, ಅವರು ಒಬ್ಬ ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಘಟನೆ ಬಗ್ಗೆ ದೆಹಲಿ ಪೊಲೀಸರು ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಇಂದಿನಿಂದ ಹರಿಣರ ವಿರುದ್ಧ ಏಕದಿನ ಸರಣಿ – ಹೊಸ ತಾರೆಗಳ ಉಗಮಕ್ಕೆ ರೈಟ್‌ ಟೈಂ, ರಾಹುಲ್‌ ನಾಯಕತ್ವಕ್ಕೂ ಸವಾಲ್‌

Share This Article