ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

Public TV
2 Min Read
MANORANJAN

ಮೈಸೂರು: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ (Security Breach in LokSabha) ಎಸೆದಿದ್ದ ಮನೋರಂಜನ್ ಮೈಸೂರು ಮೂಲದವನಾಗಿದ್ದು, ಪುಸ್ತಕಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದನಂತೆ. ಹಾಗಾದ್ರೆ ಈತನಿಗೆ ಪಾಸ್ ಸಿಕ್ಕಿದ್ದೇಗೆ, ಏನನ್ನೂ ಪರಿಶೀಲನೆ ಮಾಡದೇ ಹಾಗೆ ಪಾಸ್ ವಿತರಣೆ ಮಾಡಿದ್ರಾ..? ಮನೋರಂಜನ್ ಅಪ್ಪ ಏನಂತಾರೆ ಅನ್ನೋದ್ರ ವರದಿ ಇಲ್ಲಿದೆ.

Huge Parliament Security Breach Lok Sabha Speaker ombirla bans visitor gallery passes 1

ಸಂಸತ್‍ನಲ್ಲಿ ಹಲ್‍ಚಲ್ ಎಬ್ಬಿಸಿದವರಲ್ಲಿ ಓರ್ವ ಮನೋರಂಜನ್. ಈತ ಮೈಸೂರಿನಲ್ಲಿ ವಾಸವಿದ್ದು, ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನು. ಶಿಕ್ಷಣಕ್ಕಾಗಿಯೇ ಕುಟುಂಬಸ್ಥರು ಮೈಸೂರು ಸೇರಿದರು. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಬೆಂಗಳೂರಿನ ಬಿಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಮನೋರಂಜನ್, 2016ರಲ್ಲಿ ಕಾಂಬೋಡಿಯಾಗೆ ತೆರಳಿದ್ದ. ಇದನ್ನೂ ಓದಿ: Security Breach in LokSabha- ಸಂಸತ್ ಒಳಗೆ, ಹೊರಗೆ ಇಂದು ಏನೇನಾಯ್ತು?

LOKSABHA 1

ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ಮೈಸೂರಿನ ಮನೋರಂಜನ್, ಕ್ರಾಂತಿಕಾರಿ ಪುಸ್ತಕಗಳ ಪ್ರೇಮಿಯಾಗಿದ್ದನಂತೆ. ಮೈಸೂರಿನ ಮನೋರಂಜನ್ ಮನೆಯಲ್ಲಿ ಹಲವಾರು ಐತಿಹಾಸಿಕ ಪುಸ್ತಕ ಪತ್ತೆಯಾಗಿವೆ. ಸುಭಾಶ್ ಚಂದ್ರ ಬೋಸ್, ಸ್ವಾತಿ ಚರ್ತುವೇದಿ, ಅಂಬಾನಿಯ ಐತಿಹಾಸಿಕ ಕ್ರಾಂತಿಕಾರಿ ಪುಸ್ತಕಗಳು ಲಭ್ಯವಾಗಿವೆ.  ಇದನ್ನೂ ಓದಿ: ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡ್ತಿದ್ದ: ಮನೋರಂಜನ್ ತಂದೆ ಮಾತು

ಸಂಸತ್ ಪಾಸ್ ಸಿಕ್ಕಿದ್ದೇಗೆ..?: ಮಂಗಳವಾರ ಮಧ್ಯಾಹ್ನ ದೆಹಲಿಯ ಪ್ರತಾಪ್ ಸಿಂಹ ಕಚೇರಿಗೆ ಬಂದಿದ್ದ ಮನೋರಂಜನ್ ಜೊತೆ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಕೂಡ ಇದ್ದ. ನಾನು ಮೈಸೂರು ನಿವಾಸಿ ಎಂದು ಪರಿಚಯ ಮಾಡಿಕೊಂಡಿದ್ದ. ನನ್ನ ತಂದೆ ಸಂಸದ ಪ್ರತಾಪ್ ಸಿಂಹಗೆ ಪರಿಚಿತರು ಎಂದು ಹೇಳಿದ್ದ. ಸಂಸದರ ದೆಹಲಿ ಪಿಎ ಸಾಗರ್‍ಗೆ ಹೇಳಿ ಪಾಸ್ ಕೊಡುವಂತೆ ಮನವಿ ಮಾಡಿಕೊಂಡರು. ನನಗೆ ಹಾಗೂ ನನ್ನ ಸ್ನೇಹಿತ ಸಾಗರ್ ಶರ್ಮಾಗೆ ಪಾಸ್ ಕೊಡುವಂತೆ ಕೋರಿದ್ದ. ಒಂದೇ ಪಾಸ್‍ನಲ್ಲಿ ಇಬ್ಬರಿಗೂ ಸಂಸತ್ ಪ್ರವೇಶಕ್ಕೆ ಅವಕಾಶ ಕೊಟ್ಟಿದ್ದಾರೆ. ಮನೋರಂಜನ್ ಅರ್ಜಿಯನ್ನ ಪರಿಗಣಿಸಿದ ಪ್ರತಾಪ್ ಸಿಂಹ ಕಚೇರಿ, ಅರ್ಜಿಯನ್ನ ಸಂಸತ್ ಅನುಮತಿಗೆ ಕಳುಹಿಸಿದ್ದ. ಸಂಸತ್‍ನಿಂದ ಅನುಮತಿ ಸಿಕ್ಕ ನಂತರ ಮನೋರಂಜನ್‍ಗೆ ಪಾಸ್ ವಿತರಣೆ ಮಾಡಲಾಗಿದೆ. ಮನೋರಂಜನ್‍ನನ್ನು ಒಮ್ಮೆಯೂ ಭೇಟಿ ಮಾಡಿರದ ಸಂಸದ ಪ್ರತಾಪ್ ಸಿಂಹಗೆ ಮನೋರಂಜನ್ ತಂದೆ ದೇವರಾಜೇಗೌಡರ ಮುಖ ಪರಿಚಯ ಅಷ್ಟೇ ಇರೋದು.

ಮಗ ಸಂಸತ್‍ಗೆ ನುಗ್ಗಿದ ಕುರಿತು ತಂದೆ ದೇವರಾಜೇಗೌರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡುತ್ತಿದ್ದ. ಸ್ವಾಮಿ ವಿವೇಕಾನಂದರ ಪುಸ್ತಕ ಸೇರಿದಂತೆ ಸಮಾಜ ಸುಧಾರಕರ ಪುಸ್ತಕ ಓದುತ್ತಿದ್ದ. ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇತ್ತ ಸಂಸತ್ ಒಳಗೆ ಯುವಕರ ಪ್ರವೇಶಕ್ಕೆ ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದೇ ಕಾರಣ ಅಂತಾ ಕಾಂಗ್ರೆಸ್ ನಾಯಕರು ಮೈಸೂರಿನ ಪ್ರತಾಪ್ ಸಿಂಹ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಸಂಸದರ ಕಚೇರಿ ಮುಂಭಾಗದ ರಸ್ತೆ ತಡೆದು, ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು.

Share This Article