ಕಾರು ಅಡ್ಡಗಟ್ಟಿ 50 ಲಕ್ಷ ರೂ. ಹಣ ದೋಚಿದ ಕಿಡಿಗೇಡಿಗಳು

Public TV
2 Min Read
MADIKERI CRIME

ಮಡಿಕೇರಿ: ಕಾರಿನಲ್ಲಿ (Car) ಬರುತ್ತಿದ್ದ ವ್ಯಕ್ತಿಗಳನ್ನು ದರೋಡೆಕೋರರು ಅಡ್ಡಗಟ್ಟಿ 50 ಲಕ್ಷ ರೂ. ದೋಚಿದ ಘಟನೆ ಪೊನ್ನಂಪೇಟೆಯ ದೇವರಪುರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಕೇರಳದ (Kerala) ಮಲಪುರಂನ ಗುತ್ತಿಗೆದಾರ ಶಂಜ್ಜಾದ್ (38) ಹಾಗೂ ಆತನ ಸ್ನೇಹಿತ ಅಫ್ನು ಎಂಬಾತನೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಕಿಡಿಗೇಡಿಗಳು ತಡೆದು ಹಣ ದೋಚಿದ್ದಾರೆ. ಶಂಜ್ಜಾದ್ ಪತ್ನಿಯ ಚಿನ್ನಾಭರಣಗಳನ್ನು ಮೈಸೂರಿನಲ್ಲಿ ಮಾರಾಟ ಮಾಡಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ದರೋಡೆಕೋರರು ಕಾರನ್ನು ತಡೆದು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಶಂಜ್ಜಾದ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಿನಿ ಬಸ್‌ಗೆ ಕಾರು ಡಿಕ್ಕಿ – ಪ್ರೇಮಿಗಳ ದಾರುಣ ಸಾವು

ಶಂಜ್ಜಾದ್ ನೀಡಿದ ದೂರಿನಲ್ಲಿ, ಆತ 750 ಗ್ರಾಂ ತೂಕದ ಚಿನ್ನಾಭರಣಗಳನ್ನು ಮೈಸೂರಿನ ಅಂಗಡಿಯೊಂದರಲ್ಲಿ ಮಾರಾಟ ಮಾಡಿ ಹಣ ಪಡೆದು ವಾಪಸ್ ಕೇರಳಕ್ಕೆ ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ ಎಂದು ಉಲ್ಲೇಖಿಸಿದ್ದಾರೆ. ಮೂರು ವಾಹನಗಳಲ್ಲಿ ಬಂದಿದ್ದ 10-15 ಮಂದಿ ಕಾರಿನಲ್ಲಿದ್ದ ಹಣ ದೋಚಿ, ಬಳಿಕ ಇಬ್ಬರನ್ನೂ ಬೇರೆ ಬೇರೆ ವಾಹನಗಳಲ್ಲಿ ಕರೆದೊಯ್ದು ಮುಖಕ್ಕೆ ಬಟ್ಟೆ ಕಟ್ಟಿ ಹಲ್ಲೆಗೈದಿದ್ದಾರೆ. ಬಳಿಕ ಇಬ್ಬರನ್ನು ಮಾರ್ಗ ಮಧ್ಯದಲ್ಲಿ ಬಿಟ್ಟು ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ. ದಾರಿಯಲ್ಲಿ ಕಾರು ಚಾಲಕರೊಬ್ಬರ ಸಹಾಯದಿಂದ ವೀರಾಜಪೇಟೆ ಠಾಣೆಗೆ ಬಳಿ ಬಿಟ್ಟು ಹೋಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಈ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. 50 ಲಕ್ಷ ರೂ. ಹಣವನ್ನು ರಾತ್ರಿ ವೇಳೆಯಲ್ಲಿ ಗಡಿ ಭಾಗದಲ್ಲಿ ತಂದಿರುವ ಬಗ್ಗೆಯೂ ಸಾಕಷ್ಟು ಅನುಮಾನಗಳು ಮೂಡಿದ್ದು, 750 ಗ್ರಾಂ ಚಿನ್ನ ಎಲ್ಲಿಂದ ಬಂದಿದೆ? ಹೇಗೆ ಕರಗಿಸಿ ಮಾರಾಟ ಮಾಡಿದ್ದಾರೆ? ದೊಡ್ಡ ಮೊತ್ತದ ಹಣವನ್ನು ಕಾರಿನಲ್ಲಿ ತರುವ ಅವಶ್ಯಕತೆ ಏನು? ಸರ್ಕಾರಕ್ಕೆ ಟ್ಯಾಕ್ಸ್ ವಂಚನೆಯೂ ಇದರಲ್ಲಿ ಸೇರಿದೆಯೇ? ದರೋಡೆಕೋರರು ಎಲ್ಲಿಂದ ಹಿಂಬಾಲಿಸಿದ್ದಾರೆ? ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ. ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಗೋಣಿಕೊಪ್ಪಲು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸರ್ಕಾರಿ ಬಸ್‌ಗಳ ಮುಖಾಮುಖಿ ಡಿಕ್ಕಿ – 5 ಅಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ

Share This Article