ಸರ್ಕಾರಿ ಬಸ್‌ಗಳ ಮುಖಾಮುಖಿ ಡಿಕ್ಕಿ – 5 ಅಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ

Public TV
1 Min Read
Chikkamagaluru Accident Bus Mudigere

ಚಿಕ್ಕಮಗಳೂರು: 2 ಸರ್ಕಾರಿ ಬಸ್‌ಗಳ (Bus) ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಮಾಕೋನಹಳ್ಳಿ ಗ್ರಾಮದ ಬಳಿ ನಡೆದಿದೆ.

ಸರ್ಕಾರಿ ಬಸ್‌ಗಳ ಅಪಘಾತಕ್ಕೆ ಎರಡೂ ಬಸ್ಸಿನ ಚಾಲಕರ ಬೇಜವಾಬ್ದಾರಿ ಹಾಗೂ ಅತಿ ವೇಗವಾಗಿ ಬಸ್ಸನ್ನು ಚಲಾಯಿಸಿದ್ದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದಿಂದ ಎರಡೂ ಬಸ್ಸಿನ ಚಾಲಕರಿಗೆ ತುಸು ಹೆಚ್ಚಾಗಿ ಗಾಯವಾಗಿದೆ.

Chikkamagaluru Accident Bus Mudigere 1

ಬಸ್‌ಗಳ ಮುಖಾಮುಖಿ ಡಿಕ್ಕಿಯಾದ ಸಂದರ್ಭದಲ್ಲೂ ಕೂಡ ಎರಡೂ ಬಸ್‌ನ ಡ್ರೈವರ್ ಸೀಟ್‌ನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೀಗಾಗಿ ಎರಡೂ ಬಸ್ಸಿನ ಚಾಲಕರಿಗೆ ಗಂಭೀರ ಗಾಯಗಳಾಗಿವೆ. ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು 5 ಅಂಬುಲೆನ್ಸ್‌ಗಳಲ್ಲಿ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಬಸ್ಸಿಲ್ಲ – ಮಧ್ಯರಾತ್ರಿ ಚಿಕ್ಕಮಗಳೂರಿನಲ್ಲಿ ಪ್ರಯಾಣಿಕರಿಂದ ಪ್ರತಿಭಟನೆ

ಮೂಡಿಗೆರೆ ತಾಲೂಕು ಬಹುತೇಕ ಮಲೆನಾಡು ಭಾಗದಿಂದ ಕೂಡಿದೆ. ಇಲ್ಲಿ ಹಾವು ಬಳುಕಿನ ರಸ್ತೆಗಳೇ ಹೆಚ್ಚು. ಹೀಗಾಗಿ ವಾಹನ ಚಾಲಕರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕು. ಇಲ್ಲವಾದರೆ ಅಪಘಾತ ಕಟ್ಟಿಟ್ಟ ಬುತ್ತಿ. ಮೂಡಿಗೆರೆ ತಾಲೂಕಿನ ಅಲ್ಲಲ್ಲಿ ಸಾಕಷ್ಟು ಅಪಘಾತಗಳು ಕೂಡ ಸಂಭವಿಸುತ್ತಿವೆ. ಆದರೆ ತರಬೇತಿ ಪಡೆದ ಸರ್ಕಾರಿ ಬಸ್‌ನ ಚಾಲಕರು ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಇಂದು ನನ್ನ ಕಣ್ಣು ತೆರೆಯಿತು: ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಹಾಡಿ ಹೊಗಳಿದ ಹೆಚ್‌ಡಿಕೆ

Share This Article