ವಿದ್ಯಾರ್ಥಿಗಳಿಗೆ ಆಡಳಿತ, ರಾಜಕೀಯ ವ್ಯವಸ್ಥೆಯ ಅರಿವು ಮುಖ್ಯ: ಸಚಿವ ಸಂತೋಷ್‌ ಲಾಡ್‌

Public TV
2 Min Read
santosh lad suvarna soudha

ಬೆಳಗಾವಿ: ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನಲ್ಲೂ ಮುಖ್ಯ. ಶಾಲಾ ಶಿಕ್ಷಣದೊಂದಿಗೆ ನಮ್ಮ ಆಡಳಿತ ವ್ಯವಸ್ಥೆ, ರಾಜಕೀಯ ಪದ್ದತಿಗಳನ್ನು ಅರ್ಥೈಸಿಕೊಳ್ಳಬೇಕು. ವಿಧಾನಮಂಡಲ ಅಧಿವೇಶನವು ವಿದ್ಯಾರ್ಥಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಜ್ಞಾನ ನೀಡುತ್ತದೆ ಎಂದು ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ವಿಧಾನಮಂಡಲ ಅಧಿವೇಶನ ವೀಕ್ಷಣೆಗಾಗಿ ತಮ್ಮ ಮತಕ್ಷೇತ್ರ ಕಲಘಟಗಿಯ ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಎರಡು ಸದನಗಳ ಕಾರ್ಯಕಲಾಪ ಪರಿಚಯಿಸಿ, ವಿಧಾನಮಂಡಲ ಅಧಿವೇಶನ ಮತ್ತು ಸುವರ್ಣಸೌಧ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ತಮ್ಮ ಕಚೇರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

santosh lad school

ಮನುಷ್ಯ ರಾಜಕೀಯ ಜೀವಿ. ಬಲಿಷ್ಠ ಭಾರತ ನಿರ್ಮಾಣ ಆಗಬೇಕಾದರೆ ಇಂದಿನ ಯುವಸಮುದಾಯ ಪ್ರಾಮಾಣಿಕವಾದ ಸಮಾಜ ಸೇವೆಯ ದೀಕ್ಷೆ ತೊಡಬೇಕು. ರಾಜಕೀಯ ಪಕ್ಷ, ಆಡಳಿತ, ಸರ್ಕಾರ, ಮಂತ್ರಿಮಂಡಲ, ಅಧಿಕಾರಶಾಹಿ ಬಗ್ಗೆ ಅರಿವು ಹೊಂದಬೇಕು. ಪ್ರತಿಯೊಬ್ಬರು ಮತದಾನ, ಚುನಾವಣೆ ಮುಂತಾದ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಜನಪ್ರತಿನಿಧಿ, ಉತ್ತಮ ಸರ್ಕಾರ ಹೊಂದಲು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿಧಾನಮಂಡಲ ಅಧಿವೇಶನ ನಮ್ಮ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮಹತ್ವ, ಕಾಯ್ದೆ, ಕಾನೂನುಗಳ ರಚನೆ, ಜನಪ್ರತಿನಿಧಿಗಳ ಹಕ್ಕು, ಕರ್ತವ್ಯಗಳನ್ನು ಪರಿಚಯಿಸುತ್ತದೆ. ನನ್ನ ಕ್ಷೇತ್ರದ ನೂರಾರು ಜನ ಅಧಿವೇಶನ ವೀಕ್ಷಣೆಗಾಗಿ ಬೆಳಗಾವಿ ಸುವರ್ಣಸೌಧಕ್ಕೆ ಆಗಿಮಿಸುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸಲು ನಮ್ಮ ಸಿಬ್ಬಂದಿ ಸಹಾಯ, ಮಕ್ಕಳಿಗೆ ಉಪಾಹಾರ, ವಿಧಾನಮಂಡಲ ಗ್ರಂಥಾಲಯ ವೀಕ್ಷಣೆಗೆ ಅವಕಾಶ ಮಾಡಿದ್ದೇನೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸೇವೆಯ ಆಸಕ್ತಿ, ಅಭಿರುಚಿ ಬೆಳೆಸುವ ನನ್ನ ಸಣ್ಣ ಪ್ರಯತ್ನವಿದು ಎಂದರು.

ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಸುವರ್ಣಸೌಧಕ್ಕೆ ಆಗಮಿಸಿದ ತಕ್ಷಣ, ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ವಿಶೇಷ ಕೊಠಡಿಯಲ್ಲಿ ಸಂವಿಧಾನದ ಮೌಲ್ಯಗಳು, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಪಡೆದುಕೊಂಡರು. ಈ ಕುರಿತು ಪ್ರಸ್ತುತಪಡಿಸಿದ ಸಾಕ್ಷ್ಯಚಿತ್ರ ವೀಕ್ಷಿಸಿದರು.

ವಿಧಾನಸಭೆ ಕಲಾಪ, ವಿಧಾನಪರಿಷತ್‌ ಕಲಾಪ ವೀಕ್ಷಿಸಿದರು. ವಿಧಾನಮಂಡಲ ಗ್ರಂಥಾಲಯಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಪಿ.ಕುಮಾರ, ಉಪ ಕಾರ್ಮಿಕ ಆಯುಕ್ತ ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತೆ ಎಂ.ಬಿ.ಅನ್ಸಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೊಗುರ, ಹಿರಿಯ ಕಾರ್ಮಿಕ ನಿರೀಕ್ಷಕ ಮಂಜುನಾಥ ಅಸ್ತಿಕಟ್ಟಿ, ಕಲಘಟಗಿ ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಾಲತಿ ಹಿರೇಮಠ, ಗ್ರಂಥಪಾಲಕಿ ಭಾರತಿ ದಂಡಿನ ಹಾಗೂ ಇತರರು ಇದ್ದರು. ಕೊನೆಯಲ್ಲಿ ಸಚಿವರು ವಿದ್ಯಾರ್ಥಿಗಳಿಗೆ ಉಪಹಾರ ಮಾಡಿಸಿ, ಚಾಕಲೇಟ್ ನೀಡಿ ಬೀಳ್ಕೊಟ್ಟರು.

Share This Article