ಬೆಂಗಳೂರು: ಬಂಗಾಳಿ ಭಾಷೆಯ ಸುಪ್ರಸಿದ್ಧ ಬರಹಗಾರರಾದ ಶೀರ್ಷಂಧು ಮುಖ್ಯೋಪಧ್ಯಾಯ (Shirshendu Mukhopadhyay) ಅವರನ್ನು 2023ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ (Kuvempu National Award) ಆಯ್ಕೆ ಮಾಡಲಾಗಿದೆ.
ನ.17 ರಂದು ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ (BL Shabkar) ಅವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು.
ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸಂಚಾಲಕರಾಗಿದ್ದ ಆಯ್ಕೆ ಸಮಿತಿಯಲ್ಲಿ, ನಿರ್ಮಲ್ ಕಾಂತಿ ಭಟ್ಟಾಚಾರ್ಯ, ಗೀತಾ ವಿಜಯಕುಮಾರ್ ಹಾಗೂ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ತೀರ್ಪುಗಾರರಾಗಿದ್ದರು.
ಬಂಗಾಳಿ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ, ವರ್ತಮಾನದ ಬಹು ಮಹತ್ವದ ಮತ್ತು ಜನಪ್ರಿಯ ಲೇಖಕರಾದ, ಶೀರ್ಷಂಧು ಮುಖ್ಯೋಪಧ್ಯಾಯ ಅವರನ್ನು ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?
ಜನಪ್ರಿಯ ಬರಹಗಾರರಾಗಿರುವ ಶೀರ್ಷಂಧು ಅವರು ತಮ್ಮ ಹೊಸತನದ ಬರವಣಿಗೆಗಳಿಂದ ಬೆಂಗಾಳಿ ಭಾಷಾ ಸಾಹಿತ್ಯವನ್ನೂ, ತನ್ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕಾದಂಬರಿ, ಪ್ರವಾಸಕಥನ, ಮಕ್ಕಳ ಪುಸ್ತಕಗಳು ಸೇರಿ ಸುಮಾರು 90 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವೂ ಸೇರಿದಂತೆ ಹಲವಾರು ಪುರಸ್ಕಾರಗಳು ಶೀರ್ಷಂಧು ಅವರಿಗೆ ದೊರೆತಿರುತ್ತವೆ. ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನವಾದ ಡಿ.29 ರಂದು ಶೀರ್ಷಂಧು ಮುಖ್ಯೋಪಧ್ಯಾಯ ಅವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯೂ 5 ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ.