ರಾಮನಗರ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿರುವ (Missing) ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara) ಅವರ ಬಾವ ಮಹದೇವಯ್ಯ (Mahadevaiah) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ಕಾರು (Car) ರಾಮಾಪುರದಲ್ಲಿ ಪತ್ತೆಯಾಗಿದೆ. ಕಾರಿನ ಹಿಂಭಾಗದಲ್ಲಿ ರಕ್ತದ ಮಾದರಿಯ ಕಲೆ ಕಾಣಿಸಿಕೊಂಡಿದ್ದು, ಮಹದೇವಯ್ಯ ಕಿಡ್ನ್ಯಾಪ್ ಮಾಡಿರುವ ಶಂಕೆಗೆ ಇನ್ನಷ್ಟು ಪುಷ್ಠಿ ದೊರೆತಿದೆ.
ಡಿಸೆಂಬರ್ 1 ಶುಕ್ರವಾರ ತಡರಾತ್ರಿಯಿಂದ ಮಹದೇವಯ್ಯ ನಾಪತ್ತೆಯಾಗಿದ್ದಾರೆ. ಅವರ ಬ್ರೀಜ್ಜಾ ಕಾರು ಕೂಡಾ ಅಂದು ನಾಪತ್ತೆ ಆಗಿತ್ತು. ಇದೀಗ ಕಾರು ಪತ್ತೆಯಾಗಿದ್ದು, ಮಹದೇವಯ್ಯ ಸುಳಿವು ಮಾತ್ರ ದೊರೆತಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ ಕೋರ್ಟ್‌ನಲ್ಲಿ ಹಲವು ಜಮೀನು ವ್ಯಾಜ್ಯ ನಡೆಸುತ್ತಿದ್ದರು. ಮಹದೇವಯ್ಯ ನಾಪತ್ತೆ ಹಿಂದೆ ಹಲವು ಅನುಮಾನ ಹುಟ್ಟಿಕೊಂಡಿದೆ. ಜಮೀನಿನ ವಿಚಾರಕ್ಕೆ ಮಹದೇವಯ್ಯ ಕಿಡ್ನಾಪ್ ಆಗಿರುವ ಶಂಕೆಯಿದೆ.
ಇದೀಗ ರಾಮಾಪುರದಲ್ಲಿ ಪತ್ತೆಯಾಗಿರುವ ಕಾರನ್ನು ಫಾರೆನ್ಸಿಕ್ ಟೀಂ ಪರಿಶೀಲನೆ ನಡೆಸಿದೆ. ರಾಮನಗರದ ಪೊಲೀಸ್ ತನಿಖಾ ಟೀಂನಿಂದಲೂ ಕಾರಿನ ಪರಿಶೀಲನೆ ನಡೆದಿದೆ. ಸದ್ಯ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾರನ್ನು ಇರಿಸಲಾಗಿದೆ. ತನಿಖಾ ತಂಡ ನಿನ್ನೆ ತಡರಾತ್ರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಇದನ್ನೂ ಓದಿ: Mizoram Election Results: ZPMಗೆ ಮುನ್ನಡೆ – ಮಿಜೋರಾಂನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ
ಕಾರು ಹನೂರು ತಾಲೂಕಿನ ರಾಮಾಪುರಕ್ಕೆ ಬಂದಿದ್ದು ಹೇಗೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕಾರು ಬಂದಿರುವ ಮಾರ್ಗದ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನ ಹಿಂಭಾಗದಲ್ಲಿ ರಕ್ತದ ಮಾದರಿ ಗುರುತು ಪತ್ತೆಯಾಗಿದ್ದು, ಕಾರನ್ನು ನಿಲ್ಲಿಸುವಾಗ ಕಂಪ್ಲೀಟ್ ಲಾಕ್ ಮಾಡಿ ನಿಲ್ಲಿಸಿದ್ದಾರೆ.
ಮಹದೇವಯ್ಯ ಅನುಮಾನಾಸ್ಪದ ನಾಪತ್ತೆ ಪ್ರಕರಣ ಪೊಲೀಸರಿಗೆ ತಲೆನೋವೆನಿಸಿಕೊಂಡಿದೆ. 4 ವಿಶೇಷ ತಂಡಗಳಿಂದ ಮಹದೇವಯ್ಯಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಮೊನ್ನೆ ಅನಾಮಿಕ ವ್ಯಕ್ತಿಯಿಂದ ಮಹದೇವಯ್ಯ ಫೋನ್ ರಿಸೀವ್ ಆಗಿತ್ತು. ಇದೀಗ ಅವರ ಫೋನ್ ಕಂಪ್ಲೀಟ್ ಸ್ವಿಚ್ ಆಫ್ ಆಗಿದೆ. ಇದನ್ನೂ ಓದಿ: ಪೊಲೀಸರ ಸರ್ಪಗಾವಲಿನಲ್ಲಿ ಬೆಳಗಾವಿ ಅಧಿವೇಶನ – ಭದ್ರತೆಗೆ 5,000 ಸಿಬ್ಬಂದಿ ನಿಯೋಜನೆ