ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ

Public TV
2 Min Read
Social Media Cyber Hack

– ಕ್ರಮ ಕೈಗೊಳ್ಳದೇ ಪೊಲೀಸರ ನಿರ್ಲಕ್ಷ್ಯ

ಬೆಂಗಳೂರು: ಇಷ್ಟು ದಿನ ಉತ್ತರ ಭಾರತದ ಕೆಲ ಸೈಬರ್ ಖದೀಮರು ಫೇಸ್‌ಬುಕ್, ಇನ್ಸ್ಟಾಗ್ರಾಂ ಅನ್ನು ಹ್ಯಾಕ್ ಮಾಡಿ, ರಾಜ್ಯದ ಯುವತಿಯರ ಬಳಿ ಹಣ ಪೀಕಿಸುತ್ತಿದ್ದರು. ಇದೀಗ ಬೆಂಗಳೂರಿನ (Bengaluru) ಯುವಕನೇ ನೂರಾರು ಯುವತಿಯರ ಜೊತೆ ಚಾಟಿಂಗ್ ಮಾಡಿ, ನಕಲಿ ಖಾತೆ (Fake Account) ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ. ದೂರು ಕೊಟ್ಟರೆ ಡೀಪ್‌ಫೇಕ್ ಮಾಡಿ ಮಾನ, ಮಾರ್ಯದೆ ತೆಗೆಯುತ್ತೇನೆ ಎಂದು ಅವಾಜ್ ಹಾಕ್ತಿದ್ದ ಖದೀಮನ ಮೇಲೆ ಪೊಲೀಸರು ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರಿದ್ದಾರೆ.

ಉತ್ತರಹಳ್ಳಿಯ (Uttarahalli) ನಿವಾಸಿಯಾಗಿರುವ ರಾಘವೇಂದ್ರ ನೋಡಲು ಡೀಸೆಂಟ್ ಹುಡುಗನ ಥರ ಕಾಣಿಸಿದರೂ ಮಹಾನ್ ಕಿಲಾಡಿ. ಅಲ್ಲದೇ ಸೈಬರ್ ಕಳ್ಳ ಕೂಡ. ಇನ್ಸ್ಟಾಗ್ರಾಂನಲ್ಲಿ (Instagram) ಯುವತಿಯರ ಫೋಟೋ, ರೀಲ್ಸ್ ವೀಡಿಯೋಗಳನ್ನು ಕದ್ದು, ಫೇಸ್‌ಬುಕ್‌ನಲ್ಲಿ (Facebook) ನಕಲಿ ಖಾತೆ ಸೃಷ್ಟಿಸಿ ನೂರಾರು ಜನರಿಂದ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದ ಖತರ್ನಾಕ್ ಸೈಬರ್ ಕಳ್ಳ ಇದೀಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹಣಕ್ಕಾಗಿ ಪಾಕ್‍ಗೆ ಸೇನಾ ಮಾಹಿತಿ – ಇಬ್ಬರು ಶಂಕಿತರು ಅರೆಸ್ಟ್

ಕಮಲಾನಗರದ ತ್ರಿವೇಣಿ ಎಂಬ ಯುವತಿ ಸೈಬರ್ ಕಳ್ಳನ ಟಾರ್ಚರ್‌ಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ರಾಘವೇಂದ್ರ ಒಂದು ವರ್ಷದಿಂದ, ತ್ರಿವೇಣಿಯ ಫೋಟೋ, ವೀಡಿಯೋಗಳನ್ನು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ. ತ್ರಿವೇಣಿಯ, ಸ್ನೇಹಿತರಿಗೆ ಸಂಬಂಧಿಕರಿಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿ ಈ ಖದೀಮ ಹಣವನ್ನು ಪಡೆಯುತ್ತಿದ್ದ. ಈ ವಿಚಾರ ತ್ರಿವೇಣಿ ಗಮನಕ್ಕೆ ಬಂದಾಗ, ಅವರ ಸ್ನೇಹಿತರ ಮೂಲಕ ಬೆಂಗಳೂರಿನಲ್ಲೇ ಕುಳಿತು ಯುವತಿಯ ಫೋಟೋ ದುರುಪಯೋಗಪಡಿಸಿಕೊಂಡು ಹಣ ಮಾಡುತ್ತಿದ್ದ ಈತನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು, ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಹೀಗೆ ಎಂಟತ್ತು ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ಈವರೆಗೆ 80 ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾನೆ. ಸಂತ್ರಸ್ತೆಯ ದೂರು ಪಡೆದು ಐಪಿಸಿ ಸೆಕ್ಷನ್‌ಗಳನ್ನು ಹಾಕದೇ ಕೇವಲ ಎನ್‌ಸಿಆರ್ ಮಾಡಿಕೊಂಡು, ಕಾಂಪ್ರಮೈಸ್ ಆಗಿ ಎಂದು ಸಂತ್ರಸ್ತ ಯುವತಿಗೆ ಪೊಲೀಸರು ಮನವೊಲಿಸುತ್ತಿದ್ದಾರೆ. ಇದನ್ನೂ ಓದಿ: ರನ್ನಿಂಗ್ ರೇಸ್‌ನಲ್ಲಿ ಬಹುಮಾನ ಸಿಗದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಯುವತಿಯರ ಫೋಟೋಗಳನ್ನ ಬಳಸಿಕೊಂಡು ರಾಘವೇಂದ್ರ ಬ್ಲಾಕ್ ಮೇಲ್ ಮಾಡುತ್ತಿದ್ದ. ವೇಶ್ಯಾವಾಟಿಕೆ ದಂಧೆಗೂ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದ. ಇಂತಹ ಖದೀಮನ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೇ ಸಂತ್ರಸ್ತ ಯುವತಿಗೆ ಕಾಂಪ್ರಮೈಸ್ ಮಾಡಿಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದಾರೆ. ಕೃತ್ಯವೆಸಗಿದ ರಾಘವೇಂದ್ರನ ಮೊಬೈಲ್ ಫೋನ್ ಪೊಲೀಸರು ವಶ ಪಡಿಸಿಕೊಂಡು ಪರಿಶೀಲನೆ ಮಾಡಿದಾಗ ನೂರಾರು ಯುವತಿಯರಿಗೆ ಚಾಟಿಂಗ್ ಮಾಡಿದ್ದು, ಹಣ ಹಾಕಿಸಿಕೊಂಡಿರುವುದು, ನಕಲಿ ಖಾತೆಗಳನ್ನು ಸೃಷ್ಟಿಸಿರೋದು ಪತ್ತೆಯಾಗಿದೆ. ಆದರೆ ಪೊಲೀಸರು ಮಾತ್ರ ಇವುಗಳನ್ನ ಡಿಲೀಟ್ ಮಾಡಿಸದೇ ಬೇಜವಾಬ್ದಾರಿ ಮಾಡಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆ, ಭದ್ರತೆಗೆ ನಿಲ್ಲಬೇಕಾದ ಪೊಲೀಸರೇ ಕಳ್ಳರ ಪರವಾಗಿ ನಿಂತಿದ್ದು ನಾಚಿಗೇಡಿನ ಸಂಗತಿ. ಇದನ್ನೂ ಓದಿ: ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್‌ ಆ್ಯಪ್‌ ಪ್ರಿಯತಮೆಗೆ ಜೀವಾವಧಿ ಶಿಕ್ಷೆ

Share This Article