ಮುಂಬೈ: ಹದಿನೈದು ವರ್ಷಗಳ ಹಿಂದೆ ಈ ದಿನ (26/11/2008) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Mumbai Terror Attacks) 166 ಜನ ಬಲಿಯಾಗಿದ್ದರು. 10 ಭಯೋತ್ಪಾದಕರ ಗುಂಪಿನ ಈ ಸಂಘಟಿತ ದಾಳಿ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು. ಈ ಭೀಕರ ದಾಳಿ ನಡೆದು ಅದರ ತೀವ್ರತೆ ಇಂದಿಗೂ ಕಡಿಮೆಯಾಗಿಲ್ಲ. ಕುಟುಂಬಗಳ ರೋಧನೆ, ದಾಳಿಯಿಂದ ಕಲಿತ ಪಾಠಗಳೂ ಇಂದಿಗೂ ಮರೆತಿಲ್ಲ. ಮುಂಬೈ ದಾಳಿಯ ನಂತರ ಪಾಕಿಸ್ತಾನವು ಭಾರತದ (India vs Pakistan) ಪಾಲಿಗೆ ಶತ್ರು ರಾಷ್ಟ್ರವಾಗಿಯೇ ಉಳಿದುಬಿಟ್ಟಿದೆ. ಪ್ರತಿ ವರ್ಷವೂ ನವೆಂಬರ್ 26ನೇ ತಾರೀಖು ಬಂದಾಗೆಲ್ಲಾ ಇಡೀ ದೇಶದ ಜನ ಈ ದಾಳಿಯನ್ನ ನೆನೆದು ಶತ್ರು ರಾಷ್ಟ್ರಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ (Lashkar-e-Taiba) ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಇದನ್ನೂ ಓದಿ: World Cup 2023: ಇಂಡೋ-ಪಾಕ್ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?
ಛತ್ರಪತಿ ಶಿವಾಜಿ ಟರ್ಮಿನಲ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಈ ಸ್ಥಳಗಳಿಗೆ ಯುರೋಪಿಯನ್ನರು, ಭಾರತೀಯರು ಮತ್ತು ಯಹೂದಿಗಳು ಆಗಾಗ್ಗೆ ಭೇಟಿ ನೀಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಜನಸಂದಣಿ ಸೇರುತ್ತಿದ್ದರು. ಇದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಪೂರ್ವನಿಯೋಜಿತ ದಾಳಿ ನಡೆಸಲಾಗಿತ್ತು. ಅಂದು ನಡೆದ ದಾಳಿಗೆ ನೂರಾರು ಆಮಾಯಕ ಜೀವಗಳು ಪ್ರಾಣತೆತ್ತವು.
ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಭಯೋತ್ಪಾದಕರ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಬದುಕುಳಿದಿದ್ದ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ‘ಮೊಹಮ್ಮದ್ ಅಜ್ವಲ್ ಅಮೀರ್ ಕಸಬ್’ಗೆ 2010ರಲ್ಲಿ ಮರಣದಂಡನೆ ವಿಧಿಸಿ. 2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು. ಇದನ್ನೂ ಓದಿ: ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ
2008ರ ಈ ದುರಂತಕ್ಕೆ 15 ವರ್ಷಗಳು ಕಳೆದರೂ ಘಟನೆಯ ಭೀಕರತೆ, ಮೃತಪಟ್ಟವರ ನೆನಪು, ಕುಟುಂಬಗಳ ರೋಧನೆ ಇನ್ನೂ ಜೀವಂತ, ಕಲಿತ ಪಾಠಗಳು ಜಾಗತಿಕ ಭದ್ರತೆಗೆ ನಿರ್ಣಾಯಕವಾಗಿವೆ. ಈ ವರ್ಷ ದುರಂತ ಭಯೋತ್ಪಾದನಾ ದಾಳಿಯ 15ನೇ ವಾರ್ಷಿಕೋತ್ಸವ ಗುರುತಿಸುವ ಮೂಲಕ, ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೊಯ್ಯಾ(ಎಲ್‌ಇಟಿ) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೇ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?
ಕ್ರೀಡೆಯ ಮೇಲೂ ದಾಳಿಯ ಕರಾಳತೆ:
ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಸಂಬಂಧಗಳು ನಡೆಯದಿದ್ದರೂ ಐಸಿಸಿ ಆಯೋಜನೆಗೊಳಿಸುವ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಆದ್ರೆ ಭಾರತ-ಪಾಕ್ ತಂಡಗಳು ಮುಖಾಮುಖಿಯಾದಾಗಲೆಲ್ಲ ಈ ದಾಳಿಯನ್ನ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಮಾತ್ರವಲ್ಲ ಅದು ಕ್ರೀಡೆಯಲ್ಲ ಯುದ್ಧ ಎಂದು ಜಯಘೋಷ ಹಾಕುತ್ತಾ, ಭಾರತ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲೂ ಪಾಕಿಸ್ತಾನ ತಂಡ ಭಾರತದ ಎದುರು ಹೀನಾಯ ಸೋಲನುಭವಿಸಿದ್ದು ಕಣ್ಣ ಮುಂದಿದೆ.