ಮಡಿಕೇರಿ: ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಬಿಜೆಪಿ (BJP) ಕಾರ್ಯಕರ್ತರಿಗೆ ಪೊಲೀಸರಿಂದ ಮಾನಸಿಕ ಕಿರುಕುಳ ಹೆಚ್ಚಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಪೊಲೀಸ್ (Police) ಠಾಣೆಗೆ ತೆರಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ ಸಂಸದ, ಪೊಲೀಸರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಾಗುವ ಪ್ರಮಾಣ ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ.
ಕಳೆದ 25 ವರ್ಷಗಳಿಂದ ಅಪ್ಪಚ್ಚು ರಂಜನ್ ಮತ್ತು 20 ವರ್ಷಗಳಿಂದ ಕೆ.ಜಿ ಬೋಪಯ್ಯ ಕೊಡಗಿನಲ್ಲಿ ಶಾಸಕರಾಗಿದ್ದರು. ಇವರ ಅವಧಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಕಿರುಕುಳ ನೀಡಲಿಲ್ಲ. ಇದೀಗ ಬಿಜೆಪಿ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇಂಥ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Bengaluru Kambala- ಕರೆಯಲ್ಲಿ ಕೋಣಗಳ ಕಮಾಲ್ ಕಣ್ತುಂಬಿಕೊಂಡ ಜನ
ಪೊಲೀಸರಿಗೆ ಎಚ್ಚರಿಕೆ ನೀಡಲು ಕಾರಣವೇನು?: ಇತ್ತೀಚೆಗೆ ಬೆಂಗಳೂರಿನ ಬಿಲ್ಡರ್, ಕಾಂಟ್ರ್ಯಾಕ್ಟರ್ ಅಂಬಿಕಾಪತಿ ಮನೆಯಲ್ಲಿ ಸಿಕ್ಕ 42 ಕೋಟಿ ರೂ. ಹಣದ ವಿಚಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ಈ ಹಣ ಕಾಂಗ್ರೆಸ್ ಅವರದ್ದೇ ಅಗಿದ್ದು, ತೆಲಂಗಾಣದ ಚುನಾವಣೆಗೆ ಬಳಕೆಯಾಗಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ವಿರಾಜಪೇಟೆಯ ಅಮ್ಮತ್ತಿಯ ಬಿಜೆಪಿ ಕಾರ್ಯಕರ್ತ ಲೋಷನ್ ಕಾರ್ಯಪ್ಪ ಎಂಬವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನ ಆಧರಿಸಿ ಕಾಂಗ್ರೆಸ್ ಕಾರ್ಯಕರ್ತರು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು, ಪೋಸ್ಟ್ ಮಾಡಿದ್ದ ಲೋಷನ್ ಕಾರ್ಯಪ್ಪರನ್ನು ಕರೆಸಿ ಈ ರೀತಿಯಲ್ಲಿ ಪೋಸ್ಟ್ ಮಾಡಬೇಡಿ, ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಿ ಮುಚ್ಚಳಿಕೆ ಪತ್ರ ಬರೆಸಿ ಕಳಿಸಿದ್ದರು.
ಲೋಷನ್ ಕಾರ್ಯಪ್ಪ, ಪೊಲೀಸರು ಬರೆಸಿಕೊಂಡು ಮುಚ್ಚಳಿಕೆ ಪತ್ರವನ್ನು ಮತ್ತೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ತೆಗೆದು ಹಾಕುವಂತೆ ಪೊಲೀಸರು ಇಂದು ಠಾಣೆಗೆ ಕರೆಸಿದ್ದಾರೆ. ಈ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ ಕೆ.ಜಿ ಬೋಪಯ್ಯ ತೆರಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಗಂಡನನ್ನು ಕಳೆದುಕೊಂಡಿದ್ದ ಡಿಸಿ ಕಚೇರಿ ಎಸ್‍ಡಿಎ ಆತ್ಮಹತ್ಯೆ!