ಅಸಮಾಧಾನಿತ ನಾಯಕ ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ

Public TV
2 Min Read
vijayendra ramesh jarkiholi

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಅನೇಕರ ಅಸಮಾಧಾನಕ್ಕೆ ಗುರಿಯಾಗಿದ್ದ ಬಿ.ವೈ.ವಿಜಯೇಂದ್ರ (B.Y.Vijayendra) ಇಂದು (ಗುರುವಾರ) ಶಾಸಕ ರಮೇಶ್‌ ಜಾರಕಿಹೊಳಿ (Ramesh Jarkiholi) ಮನೆಗೆ ಭೇಟಿ ನೀಡಿದರು. ಆ ಮೂಲಕ ಅಸಮಾಧಾನಗೊಂಡಿರುವ ಪಕ್ಷದ ನಾಯಕರ ಮನವೊಲಿಕೆಗೆ ವಿಜಯೇಂದ್ರ ಮುಂದಾಗಿದ್ದಾರೆ.

ಸದಾಶಿವನಗರದ ರಮೇಶ್ ಜಾರಕಿಹೊಳಿ‌ ನಿವಾಸಕ್ಕೆ ಬೆಳಗ್ಗೆ ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ವಿಜಯೇಂದ್ರಗೆ ಜಾರಕಿಹೊಳಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಇಬ್ಬರೂ ಒಟ್ಟಿಗೆ ಕುಳಿತು ಉಪಾಹಾರ ಸೇವಿಸಿದರು. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

ramesh jarkiholi vijayendra

ವಿಜಯೇಂದ್ರ ನೇಮಕ ಹಾಗೂ ವಿಪಕ್ಷ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಕೊಡದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅತೃಪ್ತಿಗೊಂಡಿದ್ದರು. ಹೀಗಾಗಿ ಅವರ ಮನವೊಲಿಕೆಗೆ ವಿಜಯೇಂದ್ರ ಮುಂದಾಗಿದ್ದಾರೆ.

ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಅವರ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ಕೆಲವು ಸಲ ಅವರು ಅಸಮಾಧಾನ ತೋಡಿಕೊಂಡಿದ್ದರು. ನನ್ನ ಜವಾಬ್ದಾರಿ ಎಲ್ಲರನ್ನೂ ಪಕ್ಷದಲ್ಲಿ ಜೊತೆಗೆ ಕರೆದೊಯ್ಯುವುದು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದೇನೆ. ಮೋದಿಯವರು ಮತ್ತೆ ಪ್ರಧಾನಿ ಆಗಬೇಕು. ಪಕ್ಷದಲ್ಲಿ ಸಹಕಾರ ಕೊಡ್ತೇನೆ ಅಂತ ಹೇಳಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಕ್ರಮ ಹಣ ಸಾಗಾಟ ಆರೋಪ – ಸಚಿವ ಜಮೀರ್‌ ಇದ್ದ ಹೋಟೆಲ್ ಮೇಲೆ ಹೈದರಾಬಾದ್‌ ಪೊಲೀಸ್‌ ದಾಳಿ!

ಅವರಿಗೂ ಕೆಲವು ಸಣ್ಣಪುಟ್ಟ ಅಸಮಧಾನ ಇದ್ದವು. ಅದರ ಬಗ್ಗೆ ಮಾತಾಡಿದ್ದಾರೆ. ಇವತ್ತು ಭೇಟಿ ಮಾಡಿ ಮಾತನಾಡಿದ್ದೇನೆ. ಅವರ ಹಲವು ವಿಚಾರ ಮಾತನಾಡಿದ್ದಾರೆ. ವರಿಷ್ಠರು ನಿಮಗೆ ರಾಜ್ಯಧ್ಯಕ್ಷ ಸ್ಥಾನ ನೀಡಿದ್ದಾರೆ. ಇದರ ಬಗ್ಗೆ ಅಸಮಾಧಾನ ಇಲ್ಲ ಅಂದಿದ್ದಾರೆ. ಮೋದಿ ಕೈ‌ಬಲಪಡಿಸಬೇಕು ಎಂದಿದ್ದಾರೆ. ಪಕ್ಷದ ಹಿರಿಯರು ಏನೇ ಹೇಳಿಕೆ ನೀಡಿದರೂ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತೇನೆ ಎಂದು ತಿಳಿಸಿದರು.

ನಾನು ಮಾತನಾಡಬಾರದು, ನನ್ನ ಕೆಲಸ ಮಾತನಾಡಬೇಕು. ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕೆಲಸ ಮಾಡುತ್ತೇನೆ. ರಾಷ್ಟ್ರೀಯ ನಾಯಕರು ಜವಾಬ್ದಾರಿ ನೀಡಿದ್ದಾರೆ. ಕೆಲವರ ಅಭಿಪ್ರಾಯ ಬೇರೆ ಇರುತ್ತೆ. ಎಲ್ಲವನ್ನೂ ಸರಿ‌ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.

Share This Article