ಮೋದಿ ಡೀಪ್‌ ಫೇಕ್‌ ವಿಡಿಯೋ ವೈರಲ್‌ – ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದ ವ್ಯಕ್ತಿ

Public TV
1 Min Read
‘Not deep fake it was me says Vikas Mahante PMs doppelganger over garbas clip

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಆ ವಿಡಿಯೋದಲ್ಲಿರುವ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಬಾಲಿವುಡ್‌ನ ಹಲವು ನಟಿಯರ ಡೀಪ್‌ ಫೇಕ್‌ (Deep Fake) ವಿಡಿಯೊಗಳು ವೈರಲ್‌ ಆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಡೀಪ್‌ ಫೇಕ್‌ ತಂತ್ರಜ್ಞಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ನಾನು ಗರ್ಬಾ ನೃತ್ಯ ಮಾಡುವ ರೀತಿ ಬಿಂಬಿಸಿದ್ದ ಡೀಪ್‌ಫೇಕ್‌ ವಿಡಿಯೊವನ್ನು ನಾನೇ ನೋಡಿದ್ದೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಗರ್ಬಾ ನೃತ್ಯದ (Garba Dance) ವಿಡಿಯೋ ವೈರಲ್‌ ಆಗಿತ್ತು.

NARENDRA MODI 1

ಈಗ ವಿಡಿಯೋದಲ್ಲಿರುವ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿ ಅವರನ್ನೇ ಹೋಲುವ ವಿಕಾಸ್‌ ಮಹಾಂತೆ (Vikas Mahante) ಪ್ರತಿಕ್ರಿಯಿಸಿ, ಗರ್ಬಾ ನೃತ್ಯದಲ್ಲಿ ಕಾಣಿಸಿಕೊಂಡಿರುವುದು ನಾನೇ. ಅದು ಡೀಪ್‌ ಫೇಕ್‌ ವಿಡಿಯೊ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನರೇಂದ್ರ ಮೋದಿ ಅವರಂತೆ ನಾನು ಕಾಣುತ್ತಿರುವುದರಿಂದ ದೇಶ-ವಿದೇಶಗಳಿಂದ ನನಗೆ ಆಹ್ವಾನ ಬರುತ್ತದೆ. ನಾನು ಮೋದಿ ಅವರ ಆಲೋಚನೆಗಳು ತಿಳಿಸಲು ಪ್ರಯತ್ನಿಸುತ್ತೇನೆ. ಅದು ಡೀಪ್‌ ಫೇಕ್‌ ವಿಡಿಯೋ ಅಲ್ಲ. ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದಿದ್ದಾರೆ.  ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

ಮಹಾರಾಷ್ಟ್ರದ ಮಲಾಡ್‌ನಲ್ಲಿ ಉದ್ಯಮಿಯಾಗಿರುವ ವಿಕಾಸ್‌ ಮಹಾಂತೆ ಅವರು ನರೇಂದ್ರ ಮೋದಿ ಅವರನ್ನೇ ಹೋಲುತ್ತಾರೆ. ಈ ಕಾರಣದಲ್ಲಿ ಹಲವು ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರವನ್ನೂ ಮಾಡಿದ್ದಾರೆ. ಬಿಜೆಪಿ ಬೆಂಬಲಿಗರು ಆಯೋಜಿಸುವ ಹಲವು ಕಾರ್ಯಕ್ರದ ಉದ್ಘಾಟನೆಯನ್ನು ಇವರೇ ಮಾಡುತ್ತಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಲಂಡನ್‌ ಸೇರಿದಂತೆ 8 ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದಾರೆ.

ಮೋದಿ ಬಯೋಪಿಕ್‌ನಲ್ಲಿ ಇವರು ಅಭಿನಯಸಿದ್ದಾರೆ. ಪ್ರಧಾನಿ ಅನುಮತಿ ನೀಡಿದ ಬಳಿಕ ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾನು ಮೋದಿ ಅವರ ಹಲವು ವಿಡಿಯೋಗಳನ್ನು ವೀಕ್ಷಣೆ ಮಾಡಿ ಮಾತನಾಡಲು ಪ್ರಯತ್ನಿಸಿದರೂ ಅವರ ಧ್ವನಿಯಂತೆ ಮಾತನಾಡಲು ಯಶಸ್ವಿಯಾಗಿಲ್ಲ ಎಂದು ತಿಳಿಸಿದರು.

 

Share This Article