ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ – ಸರ್ಕಾರ ಆಸ್ಪತ್ರೆ ಗ್ಯಾರಂಟಿ ನೀಡಲಿ: ಶಾಸಕ ದಿನಕರ ಶೆಟ್ಟಿ

Public TV
2 Min Read
padayatra uttara kannada

ಉತ್ತರ ಕನ್ನಡ: ಜಿಲ್ಲೆಯಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶಿರಸಿಯಿಂದ ಕಾರವಾರದ ವರೆಗೆ ಜಿಲ್ಲೆಯ ಜನರಿಗಾಗಿ ಪಾದಯಾತ್ರೆ ಮಾಡುತ್ತಿರುವ ಅನಂತಮೂರ್ತಿ ಹೆಗಡೆಯವರ ಕೆಲಸ ಪುಣ್ಯದ ಕೆಲಸ. ಇಂತಹ ಕೆಲಸವನ್ನು ನಾವೆಲ್ಲರೂ ಬೆಂಬಲಿಸಬೇಕು ಎಂದು ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ (Dinakara Shetty) ಹೇಳಿದರು.

ಇಂದು (ಭಾನುವಾರ) ಸಮಾಜ ಸೇವಕ ಶಿರಸಿ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹಮ್ಮಿಕೊಂಡ ಶಿರಸಿಯಿಂದ ಕಾರವಾರದ ವರೆಗೆ (Karawara) ಪಾದಯಾತ್ರೆಯೂ ಕುಮಟಾ ನಗರವನ್ನು ಪ್ರವೇಶಿಸಿದೆ. ಪಾದಯಾತ್ರೆಯನ್ನು ಸ್ವಾಗತಿಸಿ ಇಲ್ಲಿನ‌ ಮಹಾಸತಿ ದೇವಾಲಯದ ಮುಂಭಾಗ ಆಯೋಜಿಸಿದ ಸಭೆಯಲ್ಲಿ ದಿನಕರ ಶೆಟ್ಟಿ ಮಾತನಾಡುತ್ತಾ, ಶಿರಸಿಯಿಂದ ಕಾರವಾರದ ವರೆಗೆ ಪಾದಯಾತ್ರೆ ಮಾಡುವುದು ಸುಲಭದ ಮಾತಲ್ಲ. ಅವರು ಒಂದು‌ ದಿಟ್ಟ ನಿರ್ಧಾರ ಮಾಡಿದ್ದಾರೆ. ಈ ಕೆಲಸ ಯಾರಿಂದಾದರೂ ಆಗಲಿ. ಆದರೆ ಒಂದು ಒಳ್ಳೆಯ ಕೆಲಸ ಆಗಿ ಜನರಿಗೆ ಅನುಕೂಲವಾಗಲಿ. ನಮ್ಮ‌‌ ನಿಮ್ಮೆಲ್ಲರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಪಕ್ಕದ ಜಿಲ್ಲೆಯ ಜನಪ್ರತಿನಿಧಿಗಳ ಹಾಗೆ ನಾವೆಲ್ಲ ಪಕ್ಷ ಭೇದ ಮರೆತು ಆಸ್ಪತ್ರೆ ಸ್ಥಾಪನೆಗೆ ಒಗ್ಗಟ್ಟು ಪ್ರದರ್ಶನ ಮಾಡೋಣ. ಯಾವ ಸರ್ಕಾರ ಮಾಡಿದರೇನು? ಒಟ್ಟಿನಲ್ಲಿ ಆಸ್ಪತ್ರೆಯಾಗಿ ಜನರಿಗೆ ಅನುಕೂಲ ಆಗಲಿ. ಕಾಂಗ್ರೆಸ್ ಸರ್ಕಾರ ಆಸ್ಪತ್ರೆ ನೀಡುವ ಗ್ಯಾರಂಟಿ ನೀಡಲಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ: ಬಿ.ಸಿ ಪಾಟೀಲ್

padayatra uttara kannada 1

ನಂತರ ಮಾತನಾಡಿದ ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ, ಹಿಂದಿನ‌ ಬಿಜೆಪಿ ಸರ್ಕಾರ ಇದ್ದಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರ ಜಾಗವನ್ನು ಪರಿಶೀಲನೆ ‌ಮಾಡಿತ್ತು. ನಂತರ ಬಿಜೆಪಿ‌ ಸರ್ಕಾರ ಅಧಿಕಾರ ಕಳೆದುಕೊಂಡಿತು. ಮುಂದೆ ಹಣವು ಕೂಡ ಬಿಡುಗಡೆಯಾಗಿಲ್ಲ. ಯಾವುದೇ ಪ್ರಕ್ರಿಯೆಯೂ ಮುಂದುವರೆಯಲಿಲ್ಲ. ಶಾಸಕರು ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಎಲ್ಲಿಯಾದರೂ ಕೂಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಡೆಯಬೇಕು ಎಂದರೆ ಅಲ್ಲಿ ಮೆಡಿಕಲ್ ಕಾಲೇಜು ಇರಬೇಕು. ಕಾಲೇಜೂ ಇಲ್ಲ ಎಂದರೆ ವೈದ್ಯಾಧಿಕಾರಿಗಳ ಕೊರತೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಗಲೇಬೇಕು. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟನ್ನು ತೋರಿಸಬೇಕು ಎಂದು ಒತ್ತಾಯಿಸಿದರು.

ಕುಮಟಾದ ಹಿರಿಯ ವಕೀಲ ಆರ್.ಜಿ.ನಾಯ್ಕ ಮಾತನಾಡಿ, ಅನಂತಮೂರ್ತಿ ಹೆಗಡೆಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೇವರು ಶಕ್ತಿ ನೀಡಲಿ. ನಾನು, ಶಾಸಕ ದಿನಕರ ಶೆಟ್ಟಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಒಂದು ಮಾತನ್ನು ಹೇಳುತ್ತೇನೆ. ಈ ಆಸ್ಪತ್ರೆ ವಿಚಾರವಾಗಿ ತಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡಿ. ಉಸ್ತುವಾರಿ ಸಚಿವರು ಒಂದು ಸಭೆ ಕರೆದು ನಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸಿದರು. ಇದನ್ನೂ ಓದಿ: ಬರ ಪರಿಸ್ಥಿತಿಯ ಅಧ್ಯಯನ ಮಾಡಿ, ವರದಿ ನೀಡುವಂತೆ ಸಚಿವರಿಗೆ ಸಿಎಂ ಪತ್ರ

ಈ ವೇಳೆ ಸ್ಥಳೀಯ ಮುಖಂಡರು ಸೇರಿದಂತೆ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಂತರ ದಿವಗಿ ಮೂಲಕ ಸಾಗಿದ ಪಾದಯಾತ್ರೆಗೆ ಮಿರ್ಜಾನನಲ್ಲಿ ಭವ್ಯ ಸ್ವಾಗತ‌ ನೀಡಿ ಅಲ್ಲಿನ‌ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸ್ಥಳೀಯರು ಪಾದಯಾತ್ರೆಗೆ ಬೆಂಬಲ ನೀಡಿದರು. ಇಂದು ತಾಲೂಕಿನ ಬಗ್ರಿಯಲ್ಲಿ‌ ಪಾದಯಾತ್ರೆ ವಾಸ್ತವ್ಯವಾಗಲಿದೆ.

ಕುಮಟಾ ಆಟೋ ರಿಕ್ಷಾ ಚಾಲಕರ ಬೆಂಬಲ
ಕುಮಟಾ ನಗರಕ್ಕೆ ಆಗಮಿಸುತ್ತಿದ್ದಂತೆ ನೂರಾರು ಆಟೋ ಚಾಲಕರು ತಮ್ಮ ಆಟೋದೊಂದಿಗೆ ಸ್ಥಳಕ್ಕೆ ಧಾವಿಸಿ ಕುಮಟಾ ಪಟ್ಟಣದಿಂದ ಸ್ವಯಂಪ್ರೇರಿತರಾಗಿ ದಿವಗಿ ವರೆಗೆ ಆಗಮಿಸಿ ಭವ್ಯ ಸ್ವಾಗತ ಕೋರಿ ಅಭೂತಪೂರ್ವ ಬೆಂಬಲ ಸೂಚಿಸಿದರು.‌

Share This Article