– ಸಂಚಲನ ಮೂಡಿಸಿದ ಇಡಿ ಹೇಳಿಕೆ
ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ (Chhattisgarh Election) ಕೆಲವೇ ದಿನಗಳು ಬಾಕಿ ಇರುವಾಗ ಹಾಲಿ ಕಾಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರು ಮಹದೇವ್ ಬೆಟ್ಟಿಂಗ್ ಆಪ್‌ನ ಅಕ್ರಮದ ಸುಳಿಗೆ ಬಿದ್ದಿದ್ದಾರೆ.
ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು (Mahadev Betting App Promoters) ಇಲ್ಲಿಯವರೆಗೆ ಭೂಪೇಶ್ ಬಘೇಲ್ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಎಂದು ಜಾರಿ ನಿರ್ದೇಶನಾಲಯ (ED) ಹೇಳಿದೆ.
ಇಡಿ ಈಗಾಗಲೇ ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ 15 ಕೋಟಿ ರೂ. ಇರುವ ಬ್ಯಾಂಕ್ ಖಾತೆಯನ್ನೂ ಜಪ್ತಿ ಮಾಡಿದ್ದು, ಆಸಿಂ ದಾಸ್ ಎಂಬಾತನನ್ನು ಬಂಧಿಸಿದೆ. ಇದನ್ನೂ ಓದಿ: ಮಸೀದಿಯಲ್ಲಿ ಒಗ್ಗಟ್ಟಿನ ಸಭೆ, ಮುಸ್ಲಿಂ ಮತಗಳಿಂದಲೇ ಕಾಂಗ್ರೆಸ್ ಅಧಿಕಾರ: ಜಮೀರ್
ಗುರುವಾರ ಹೋಟೆಲ್ ಟ್ರಿಟಾನ್ ಮತ್ತು ಭಿಲಾಯಿಯ ಮತ್ತೊಂದು ಸ್ಥಳದಲ್ಲಿ ಶೋಧಗಳನ್ನು ನಡೆಸಲಾಗಿದೆ. ಈ ವೇಳೆ ಹಣ ಸಾಗಾಟದ ಕೊರಿಯರ್ ಅನ್ನು ಯಶಸ್ವಿಯಾಗಿ ತಡೆ ಹಿಡಿಯಲಾಗಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ವೆಚ್ಚಕ್ಕಾಗಿ ದೊಡ್ಡ ಮೊತ್ತದ ನಗದನ್ನು ತಲುಪಿಸಲು ಈ ಹಣ ಸಾಗಾಟ ಮಾಡಲಾಗುತ್ತಿತ್ತು ಎಂದು ಇಡಿ ತಿಳಿಸಿದೆ.
ದಾಸ್ ಕಾರು ಮತ್ತು ನಿವಾಸದಿಂದ 5.39 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಯುಎಇಯಲ್ಲಿ ನೆಲೆಸಿರುವ ಮಹದೇವ್ ಆ್ಯಪ್‌ನ ಪ್ರವರ್ತಕರು ಹಣವನ್ನು ರಾಜಕಾರಣಿ ಭೂಪೇಶ್ ಬಘೇಲ್ ತಲುಪಿಸಲು ವ್ಯವಸ್ಥೆ ಮಾಡಿದ್ದನ್ನು ದಾಸ್ ಒಪ್ಪಿಕೊಂಡಿದ್ದಾನೆ. ಛತ್ತೀಸ್‌ಗಢ ರಾಜ್ಯದಲ್ಲಿ ಮುಂದೆ ನಡೆಯಲಿರುವ ಚುನಾವಣಾ ವೆಚ್ಚಕ್ಕೆ ಬಳಸಲು ಈ ಹಣ ಬಳಕೆಯಾಗುತ್ತಿತ್ತು. ಇಲ್ಲಿಯವರೆಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಸುಮಾರು 508 ಕೋಟಿ ರೂ. ಸಂದಾಯ ಮಾಡಲಾಗಿದೆ ಎಂದು ಆತ ಹೇಳಿದ್ದಾನೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಇಡಿ ಹೇಳಿದೆ.
ಛತ್ತೀಸ್‌ಗಢದಲ್ಲಿ ನವೆಂಬರ್ 7 ಹಾಗೂ ನವೆಂಬರ್ 17ರಂದು ಎರಡು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಏನಿದು ಪ್ರಕರಣ?
ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಅವರು 2023ರ ಫೆಬ್ರವರಿಯಲ್ಲಿ ಯುಎಇನಲ್ಲಿ 200 ಕೋಟಿ ರೂ. ಖರ್ಚು ಮಾಡಿ ವಿವಾಹ ನಡೆಸಿದ್ದರು. ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಟುಂಬ ಸದಸ್ಯರಿಗೆ ಖಾಸಗಿ ಜೆಟ್ ವಿಮಾನವನ್ನು ಬುಕ್ ಮಾಡಲಾಗಿತ್ತು. ಚಂದ್ರಕರ್ ಅವರು ಮದುವೆಗೆ ವೆಚ್ಚ ಮಾಡಿದ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಿದ್ದು ಬಯಲಾಗಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗ ತನಿಖೆ ನಡೆಸುತ್ತಿದೆ.
Web Stories