ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್‌

Public TV
2 Min Read
Fakhar Zaman

ಕೋಲ್ಕತ್ತಾ: ಸತತ 4 ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ (Pakistan) ಕೊನೆಗೂ ತನ್ನ 7ನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಬೌಲರ್‌ ಮತ್ತು ಬ್ಯಾಟರ್‌ಗಳ ಸಾಂಘಿಕ ಪ್ರದರ್ಶನದಿಂದ ಬಾಂಗ್ಲಾದೇಶದ (Bangladesh) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಪಾಕ್‌ ಅಂಕ ಪಟ್ಟಿಯಲ್ಲಿ 6 ಅಂಕ ಪಡೆದು 5ನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಬಾಂಗ್ಲಾದೇಶ 45.1 ಓವರ್‌ಗಳಲ್ಲಿ 204 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನ ಇನ್ನೂ 105 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 205 ರನ್‌ ಹೊಡೆದು ಜಯಗಳಿಸಿತು. 7 ಪಂದ್ಯವಾಡಿ ಕೇವಲ 2 ಅಂಕ ಸಂಪಾದಿಸಿರುವ ಬಾಂಗ್ಲಾ ಈ ಪಂದ್ಯವನ್ನು ಸೋಲುವ ಮೂಲಕ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಸೆಮಿ ಫೈನಲ್‌ ರೇಸ್‌ನಿಂದ ಹೊರನಡೆಯಿತು.

pakistan team Shaheen Shah Afridi

ಪಾಕ್‌ ಆರಂಭಿಕ ಆಟಗಾರರಾದ ಅಬ್ದುಲ್ಲಾ ಶಫಿಕ್‌ ಮತ್ತು ಫಖರ್‌ ಜಮಾನ್‌ ಮೊದಲ ವಿಕೆಟಿಗ 127 ಎಸೆತಗಳಿಗೆ 128 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಬಾಂಗ್ಲಾ ಕೈಯಿಂದ ಕಸಿದರು. ಅಬ್ದುಲ್ಲಾ ಶಫಿಕ್‌ 68 ರನ್‌ (69 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಫಖರ್‌ ಜಮಾನ್‌ 81 ರನ್‌ (74 ಎಸೆತ, 3 ಬೌಂಡರಿ, 7 ಸಿಕ್ಸರ್‌) ಚಚ್ಚಿ ಔಟಾದರು.  ಇದನ್ನೂ ಓದಿ: ಪಿಸಿಬಿಗೆ ಪಾಕಿಸ್ತಾನ ವಿಶ್ವಕಪ್ ಗೆಲ್ಲುವುದು ಬೇಕಿಲ್ಲ: ಪಾಕ್ ಆಟಗಾರನ ಆರೋಪ

ನಾಯಕ ಬಾಬರ್‌ ಅಜಂ 9 ರನ್‌ ಗಳಿಸಿ ಔಟಾದರೂ ಮೊಹಮ್ಮದ್‌ ರಿಜ್ವಾನ್‌ ಔಟಾಗದೇ 26 ರನ್‌ (21 ಎಸೆತ, 4 ಬೌಂಡರಿ) ಇಫ್ತಿಕಾರ್‌ ಅಹ್ಮದ್‌ ಔಟಾಗದೇ 17 ರನ್‌ (15 ಎಸೆತ, 2 ಬೌಂಡರಿ) ಹೊಡೆಯುವ ಮೂಲಕ ಜಯವನ್ನು ತಂದುಕೊಟ್ಟರು.

ಆರಂಭದಲ್ಲೇ ಶಾಹಿನ್‌ ಅಫ್ರಿದಿ 2 ವಿಕೆಟ್‌ ಪಡೆಯುವ ಮೂಲಕ ಬಾಂಗ್ಲಾಗೆ ಶಾಕ್‌ ನೀಡಿದರು. 23 ರನ್‌ಗಳಿಗೆ ಬಾಂಗ್ಲಾ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಲಿಟ್ಟನ್‌ ದಾಸ್‌ 45 ರನ್‌ (64 ಎಸೆತ, 6 ಬೌಂಡರಿ), ಮೊಹಮದುಲ್ಲಾ 56 ರನ್‌ (70 ಎಸೆತ, 6 ಬೌಂಡರಿ, 1 ಸಿಕ್ಸರ್‌), ನಾಯಕ ಶಕಿಬ್‌ ಉಲ್‌ ಹಸನ್‌ 43 ರನ್‌ (64 ಬೌಂಡರಿ, 4 ಸಿಕ್ಸರ್‌) ಹೊಡೆದ ಪರಿಣಾಮ ಬಾಂಗ್ಲಾದೇಶ 200 ರನ್‌ಗಳ ಗಡಿ ದಾಟಿತು.

ಶಾಹಿನ್‌ ಅಫ್ರಿದಿ 9 ಓವರ್‌ ಎಸೆದು 1 ಮೇಡನ್‌ ಮಾಡಿ 23 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ವಾಸಿಮ್‌ 3 ವಿಕೆಟ್‌ ಪಡೆದರು. ಹ್ಯಾರಿಸ್‌ ರೌಫ್‌ 2 ವಿಕೆಟ್‌ ಪಡೆದರು.

ಪಾಕಿಸ್ತಾನ 7 ಪಂದ್ಯವಾಡಿ 5ನೇ ಸ್ಥಾನ ಪಡೆದರೂ ಸೆಮಿಫೈನಲ್‌ ಪ್ರವೇಶ ಉಳಿದ ತಂಡಗಳ ಫಲಿತಾಂಶದ ಮೇಲೆ ನಿಂತಿದೆ. ದಕ್ಷಿಣ ಆಫ್ರಿಕಾ 10 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದರೆ,ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ತಲಾ 8 ಅಂಕ ಪಡೆದು ಕ್ರಮವಾಗಿ ಮೂರು ಮತ್ತು ನಾಲ್ಕನೇಯ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳನ್ನು ಗೆದ್ದಿರುವ ಭಾರತ 12 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ.

 

Web Stories

Share This Article