ಭಾರತದ ನೆಲದಲ್ಲಿ ಹಮಾಸ್‌ ಕಾರ್ಯಕ್ರಮ ಬೇಕಿತ್ತಾ? – ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ

Public TV
2 Min Read
Khaled Mashal

ನವದೆಹಲಿ: ಕೇರಳದಲ್ಲಿ ಹಮಾಸ್ (Hamas) ಬೆಂಬಲಿಸಿ ನಡೆದ ಕಾರ್ಯಕ್ರಮ ಇದೀಗ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಕೇರಳದ ಮಲ್ಲಪುರಂನಲ್ಲಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ (Solidarity Youth Movement) ಇಸ್ರೇಲ್ (Israel) ನಡೆ ವಿರೋಧಿಸಿ ಹಾಗೂ ಹಮಾಸ್ ಬೆಂಬಲಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮಾಸ್ ಸಂಘಟನೆಯ ಮಾಜಿ ಮುಖ್ಯಸ್ಥ ಖಾಲಿದ್ ಮಶಾಲ್ (Khaled Mashal) ಮಾಡಿದ್ದ ರೆಕಾರ್ಡೆಡ್ ಭಾಷಣ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತದ ನೆಲದಲ್ಲಿ ಹಮಾಸ್ ಉಗ್ರರಿಗೆ ಭಾಷಣ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ (BJP) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಮಾವೇಶದಲ್ಲಿ ಹಿಂದೂ (Hindu) ಧರ್ಮದ ವಿರುದ್ಧವೂ ಅವಹೇಳನ ಮಾಡಲಾಗಿದೆ. ಹಿಂದುತ್ವವನ್ನು ಬುಲ್ಡೋಜರ್‌ಗೆ ಹೋಲಿಸಿ ಬುಲ್ಡೋಜರ್ ಹಿಂದುತ್ವವನ್ನು ಬೇರು ಸಮೇತ ಕಿತ್ತೊಗೆಯಿರಿ ಅಂತ ಘೋಷ ವಾಕ್ಯ ಹೊರಡಿಸಲಾಗಿದೆ.

ಈ ಕಾರ್ಯಕ್ರಮ ನಡೆದ 24 ಗಂಟೆಯಲ್ಲೇ ಕೇರಳದ ಕಲಮಸ್ಸೇರಿಯಲ್ಲಿ ಯಹೋಮ ಸಾಕ್ಷಿಗಳ ಪ್ರಾರ್ಥನಾ ಸ್ಥಳದಲ್ಲಿ ಬಾಂಬ್ ಸ್ಫೋಟ (Bomb Blast) ಸಂಭವಿಸಿತ್ತು. ಇದೀಗ ಕೇರಳದ ಪಿಣರಾಯಿ ವಿಜಯನ್ (Pinarayi Vijayan) ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಕೇರಳ ಸರ್ಕಾರ ಮೂಲಭೂತವಾದಿಗಳು ಹಾಗೂ ಮೂಲಭೂತವಾದಿಗಳ ಪರ ಗುಂಪುಗಳ ಪರವಿದೆ ಎಂದು ಆರೋಪಿಸಿದೆ.

ಕೇರಳದಲ್ಲಿ ಕಾಂಗ್ರೆಸ್ (Congress) ಹಾಗೂ ಎಡಪಕ್ಷಗಳಿಗೆ ತುಷ್ಠೀಕರಣದ ರಾಜಕೀಯ ಇತಿಹಾಸವೇ ಇದೆ ಅಂತ ಬಿಜೆಪಿ ಸರಣಿ ಟ್ವೀಟ್‌ಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಿಣರಾಯಿ ವಿಜಯನ್ (Pinarayi Vijayan), ತನಿಖೆ ನಡೆಯುತ್ತಿರುವಾಗಲೇ ಬಿಜೆಪಿ ರಾಜಕೀಯಕರಣಗೊಳಿಸುತ್ತಿದೆ. ಬಿಜೆಪಿ ನಾಯಕರ ಹೇಳಿಕೆಗಳು ಕೋಮುದ್ವೇಷದಿಂದ ಕೂಡಿದೆ ಅಂತ ದೂರಿದ್ದಾರೆ.

ಸರಣಿ ಸ್ಫೋಟದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ. 50ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಸಂಭವ ಇದೆ. ಮತ್ತೊಂದು ಕಡೆ ಸ್ಫೋಟದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಇದನ್ನೂ ಓದಿ: Kerala Bomb Blast: ಅತ್ತೆ ಕುಳಿತಿದ್ದ ಜಾಗ ತಪ್ಪಿಸಿ ಬಾಂಬ್ ಇಟ್ಟಿದ್ದೆ: ಆರೋಪಿ ಬಾಯ್ಬಿಟ್ಟ ಸತ್ಯವೇನು?

ಹಮಾಸ್ ನಾಯಕನ ಕಾರ್ಯಕ್ರಮದಲ್ಲಿ ಘೋಷವಾಕ್ಯಗಳು:
– ಹಿಂದುತ್ವ ಹಾಗೂ ಯಹೂದಿ ಧರ್ಮ ಎರಡೂ ಒಂದೇ. ಹಿಂದುತ್ವವನ್ನು ಬೇರು ಸಮೇತ ಕಿತ್ತೊಗೆಯಬೇಕು.
– ಹಮಾಸ್ ಉಗ್ರರಲ್ಲ. ಅವರು ಸ್ವಾತಂತ್ರ್ಯದ ಯೋಧರು. ಇಸ್ರೇಲ್‌ನಲ್ಲಿ ಹಮಾಸ್ ಮಾಡುತ್ತಿರುವುದು ಪ್ರತಿರೋಧವಷ್ಟೇ. ಪ್ಯಾಲೆಸ್ತೀನಿಯರಿಗೆ ಹಮಾಸ್ ಬೆಂಬಲ ಕೊಡುತ್ತಿದೆ

ಕೇರಳ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ
– ಭಯೋತ್ಪಾದನೆ ವೈಭವೀಕರಣ ಮಾಡುವ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದು ಸರಿಯೇ?
– ಇದು ದೇಶ ವಿರೋಧಿ ನಡೆಯಲ್ಲವೇ? ಇದು ನಾಚಿಕೆಯಿಲ್ಲದ ತುಷ್ಠೀಕರಣದ ರಾಜಕಾರಣ
– ಮೂಲಭೂತವಾದಿಗಳು, ಮೂಲಭೂತವಾದಿಗಳ ಗುಂಪುಗಳ ಪರವಲ್ಲವೇ?

 

Web Stories

Share This Article