ಬೆಳಗಾವಿ: ಕನ್ನಡ ರಾಜ್ಯೋತ್ಸವ (Kannada Rajyotsava) ಹಿನ್ನೆಲೆ ಧ್ವಜಸ್ತಂಭ (Flagpole) ನಿಲ್ಲಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ (Electric Shock) ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ (Bailahongala) ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ವಕ್ಕುಂದ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಪ್ರಜ್ವಲ್ ಚನ್ನಗೌಡ ಮುನೇಪ್ಪನವರ (18) ಮೃತಪಟ್ಟ ಯುವಕ. ಗ್ರಾಮದ ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನಿಲ್ಲಿಸಲು ತಯಾರಿ ನಡೆಸುತ್ತಿದ್ದಾಗ ಸರ್ವಿಸ್ ತಂತಿ ತಾಗಿದ್ದರಿಂದ ವಿದ್ಯುತ್ ಪ್ರವಹಿಸಿ ಪ್ರಜ್ವಲ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿ ಹತ್ಯೆ- ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್
ವಿದ್ಯುತ್ ಶಾಕ್ ತಗುಲಿದ ತಕ್ಷಣ ಸ್ಥಳೀಯರು ಯುವಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕೆರೆಗೆ ಧುಮುಕಿದ ಕಾರು- ಓರ್ವ ಪಾರು, ಇಬ್ಬರು ನೀರುಪಾಲು
ಮನೆ ಮಗನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದ್ದ ಒಬ್ಬ ಮಗನನ್ನು ಚೆನ್ನಾಗಿ ಓದಿಸಿ, ನೂರಾರು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿಗೆ ಈಗ ದಿಕ್ಕೇ ತೋಚದಾಗಿದೆ. ಅಗ್ನಿವೀರ್ ಪರೀಕ್ಷೆ ಪಾಸ್ ಆಗಿದ್ದ ಯುವಕ ಪ್ರಜ್ವಲ್, ದೈಹಿಕ ಪರೀಕ್ಷೆಗೆ ತಯಾರಾಗುತ್ತಿದ್ದ. ಅಷ್ಟರೊಳಗೆ ಈ ರೀತಿ ದುರಂತ ಸಂಭವಿಸಿರೋದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹ ಬೈಲಹೊಂಗಲ ತಾಲ್ಲೂಕಾಸ್ಪತ್ರೆಯ ಶವಾಗಾರದಲ್ಲಿದ್ದು, ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Web Stories