ಸಂತ್ರಸ್ತ ಬಾಲಕಿ ದತ್ತು ಪಡೆಯಲು ಮುಂದಾದ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ

Public TV
2 Min Read
Stop Rape

– 700ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ, 30-35 ಪೊಲೀಸರ ತಂಡದಿಂದ ಪ್ರತಿದಿನ ವಿಚಾರಣೆ
– ಸಿನಿಮೀಯ ರೀತಿಯಲ್ಲಿ ಆರೋಪಿ ಪತ್ತೆಹಚ್ಚಿದ ಉಜ್ಜಯಿನಿ ಪೊಲೀಸ್

ಭೋಪಾಲ್: ಇತ್ತೀಚೆಗೆ ಮಧ್ಯ ಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ಅತ್ಯಾಚಾರ (Ujjain Rape Case) ಸಂತ್ರಸ್ತೆಯಾದ ಬಾಲಕಿಯ ದೇಹ ರಕ್ತದ ಮಡುವಿನಿಂದ ಕೂಡಿತ್ತು. ಅರೆಬೆತ್ತಲಾಗಿ ಮೈಯೆಲ್ಲಾ ಗಾಯ ಮಾಡಿಕೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಆಕೆಯ ನೆರವಿಗೆ ಯಾರೂ ಬರಲಿಲ್ಲ ಎಂಬ ವಿಚಾರ ದೇಶಾದ್ಯಂತ ಚರ್ಚೆಯಾಗಿತ್ತು. ಆದರೀಗ ಪ್ರಕರಣವನ್ನು ಉಜ್ಜಯಿನಿ ಪೊಲೀಸರು (Ujjain Police) ಭೇದಿಸಿದ್ದು, ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

STOP RAPE

ಹೌದು. ಬಾಲಕಿಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡವನ್ನ ರಚಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ಪ್ರಾರಂಭಿಸಿದ್ದರು. ನೂರಾರು ಜನರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. 700ಕ್ಕೂ ಹೆಚ್ಚು CCTV ಕ್ಯಾಮೆರಾ ದೃಶ್ಯಗಳನ್ನ ಪರಿಶೀಲಿಸಿದ್ದರು. 30-35 ಮಂದಿ ಪೊಲೀಸರ ತಂಡ ನಿದ್ರೆಯನ್ನೂ ಬಿಟ್ಟು ಸತತ ಮೂರ್ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದರು.

ಸತತ ಕಾರ್ಯಾಚರಣೆ ಬಳಿಕ ಆಟೋ ಚಾಲಕನೊಂದಿಗೆ ಸಂಪರ್ಕದಲ್ಲಿದ್ದ ಪ್ರಮುಖ ಆರೋಪಿ ಭರತ್ ಸೋನಿಯನ್ನ ಪೊಲೀಸರು ಬಂಧಿಸಿದ್ದಾರೆ. 15 ವರ್ಷದ ಬಾಲಕಿಯನ್ನ ಉಜ್ಜಯಿನಿ ರೈಲು ನಿಲ್ದಾಣದಿಂದ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಅರೆಬೆತ್ತಲಾದ ಸ್ಥಿತಿಯಲ್ಲಿ ಬಾಲಕಿಯನ್ನ ಬಿಟ್ಟು ಹೋಗಿರುವುದು ತನಿಯಲ್ಲಿ ಬಯಲಾಗಿದೆ.

ಪೊಲೀಸರು ಮೊದಲು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಬಳಿಕ ಆತನ ಬೆನ್ನಟ್ಟಿ ಹಿಡಿದಿದ್ದಾರೆ. ಇದರೊಂದಿಗೆ ಕೃತ್ಯ ನಡೆದಿರುವುದು ತಿಳಿದಿದ್ದರೂ ಅದನ್ನು ಪೊಲೀಸರಿಗೆ ತಿಳಿಸದೇ ಇದ್ದ ಕಾರಣ ಮತ್ತೊಬ್ಬ ಆಟೋ ಚಾಲಕ ರಾಕೇಶ್ ಮಾಳವಿಯಾ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೇ ಅತ್ಯಾಚಾರದ ಪ್ರಮುಖ ಆರೋಪಿ ಭರತ್ ಸೋನಿ ಎಂಬಾತನ ತಂದೆ ರಾಜು ಸೋನಿ ತನ್ನ ಮಗನಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಅತ್ಯಾಚಾರ ಎಸಗಿದ್ದು ಮಹಾ ತಪ್ಪು, ನನ್ನ ಮಗನಿಗೆ ಶಿಕ್ಷೆ ಆಗಲೇಬೇಕು. ಮರಣದಂಡನೆ ಹೊರತಾಗಿ ಬೇರೆ ಯಾವುದೇ ಶಿಕ್ಷೆಗೂ ಅವನು ಅರ್ಹನಲ್ಲ. ಅವನನ್ನು ಕೊಂದುಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಮುಂದುವರಿದು, ಉಜ್ಜಯಿನಿ ಬೀದಿ ಬೀದಿಗಳಲ್ಲಿ ಸಹಾಯಕ್ಕಾಗಿ ಅಂಗಲಾಚಿದರೂ ಬಾಲಕಿಗೆ ಸಹಾಯ ಮಾಡದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ಬಾಲಕಿ ರಕ್ಷಣೆಗೆ ಇಬ್ಬರು ಪೊಲೀಸರು ರಕ್ತದಾನ ಮಾಡಿದ್ದಾರೆ. ಇನ್ನೂ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಯೇ ಬಾಲಕಿಯನ್ನ ದತ್ತು ಪಡೆಯಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.

Web Stories

Share This Article