ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಅಭಿನವ ಹಾಲಶ್ರೀಯನ್ನು (Abhinava Halashree) 10 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ವಂಚನೆ ಪ್ರಕರಣದಲ್ಲಿ ಆರೋಪಿ ಹಾಲಶ್ರೀಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಸೆ.29 ರ ತನಕ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ನೀಡಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೆ.29 ರಂದು ನಡೆಸಲಿದೆ. ಇದನ್ನೂ ಓದಿ: ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್
ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಲಶ್ರೀ ನಾಪತ್ತೆಯಾಗಿದ್ದರು. ಒಡಿಶಾದಲ್ಲಿ ಮಾರುವೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀಯನ್ನು ರೈಲ್ವೆ ಪೊಲೀಸರ ನೆರವಿನಿಂದ ಬಂಧಿಸಿ ಬೆಂಗಳೂರಿಗೆ ವಾಪಸ್ ಕರೆತರಲಾಗಿತ್ತು. ಸಿಸಿಬಿ ಪೊಲೀಸರು ಇಂದು 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ್ದರು.
ಆರೋಪಿಯನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ, ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ವೇಳೆ ಹಾಲಶ್ರೀ ಪರ ವಕೀಲ ಅರುಣ್ ಶ್ಯಾಂ ಕೂಡ ಹಾಜರಿದ್ದರು. ಪೊಲೀಸ್ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿ, ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಶ್ರೀ ಯತ್ನ- ಮೈಸೂರಿನ ರಾಜಕಾರಣಿ ಬಳಿ ರಾಜಿ ಪಂಚಾಯ್ತಿಗೆ ಮೊರೆ
ಆರೋಪಿಗೆ ಜಾಮೀನು ನೀಡದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲರು ಆಕ್ಷೇಪಿಸಿದರು. ತನಿಖೆ ನಡೆಯುವ ಮಧ್ಯೆ ಜಾಮೀನು ನೀಡಬಾರದು. ಸಾಕ್ಷಿ ನಾಶವಾಗುತ್ತದೆ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು 10 ದಿನ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.
Web Stories