Women’s Reservation Bill: ಹಾಲಿ ಮಹಿಳಾ ಸದಸ್ಯರ ಸಂಖ್ಯೆ 82, ಜಾರಿಯಾದ್ರೆ 181ಕ್ಕೆ ಏರಿಕೆ – ಜಾರಿ ಯಾವಾಗ?

Public TV
1 Min Read
Arjun Ram Meghwal

ನವದೆಹಲಿ: ಲೋಕಸಭೆಯ ವಿಶೇಷ ಅಧಿವೇಶನದ (Lok Sabha Special Session) ಮೊದಲ ದಿನವೇ ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಮಂಡನೆಯಾಗಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಅವರು ಮಸೂದೆಯನ್ನು ಮಂಡಿಸಿದರು. ಈ ವೇಳೆ ಮಾತನಾಡಿದ ಅವರು ಸದ್ಯ 82 ಮಹಿಳಾ ಸದಸ್ಯರು ಲೋಕಸಭೆಯಲ್ಲಿ ಇದ್ದು ಮಸೂದೆ ಕಾನೂನಾಗಿ ಜಾರಿಯಾದರೆ 181ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದರು.

ಮಸೂದೆಯಲ್ಲಿ ಏನಿದೆ?
ಮಸೂದೆಯು ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಕಲ್ಪಿಸುತ್ತದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಮೀಸಲಾತಿ ಅನ್ವಯವಾಗುವುದಿಲ್ಲ.

ಮೊದಲ ಜನಗಣತಿಗೆ ಸಂಬಂಧಿಸಿದ ಅಂಕಿ ಅಂಶ ಪ್ರಕಟವಾದ ನಂತರ ಕ್ಷೇತ್ರಗಳ ಮರು ವಿಂಗಡನೆಯಾದ (Delimitation) ಬಳಿಕ ಜಾರಿಗೆ ಬರಲಿದೆ.  ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಮೀಸಲಾದ ಮೂರನೇ ಒಂದು ಭಾಗದಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ. ಮಸೂದೆಯು ಒಬಿಸಿಗಳಿಗೆ (ಇತರ ಹಿಂದುಳಿದ ವರ್ಗ) ಮೀಸಲಾತಿಯನ್ನು ಒಳಗೊಂಡಿಲ್ಲ.

ಜಾರಿ ಯಾವಾಗ?
ಮುಂದಿನ ಜನಗಣತಿಯ (Census) ನಂತರವೇ ಕ್ಷೇತ್ರಗಳ ಮರು ವಿಂಗಡನೆಯಾಗಲಿದೆ. 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ವಿಳಂಬವಾಗಿದ್ದು, 2027ರಲ್ಲಿ ನಡೆಯುವ ಸಾಧ್ಯತೆಯಿದೆ. ಹೀಗಾಗಿ 2029ರ ನಂತರ ಮೀಸಲಾತಿ ಜಾರಿಯಾಗುವ ಸಾಧ್ಯತೆಯಿದೆ.

ಮಸೂದೆಯು ಕಾಯ್ದೆಯಾದ ನಂತರ 15 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಆದರೆ ಇದರ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ.

ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯಂತಹ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ದಶಕಗಳಿಂದ ವಿರೋಧಿಸುತ್ತಿದ್ದವು. ಸುಮಾರು 27 ವರ್ಷಗಳಿಂದ ಈ ಮಸೂದೆ ಬಾಕಿ ಉಳಿದಿತ್ತು. 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾದರೂ ಲೋಕಸಭೆಯಲ್ಲಿ ಈ ಮಸೂದೆಗೆ ಬೆಂಬಲ ಸಿಕ್ಕಿರಲಿಲ್ಲ.

 

Web Stories

Share This Article