ಕೋಲಾರ: ತಾಯಿ ತೀರಿಕೊಂಡ ಹಿನ್ನೆಲೆ ಮಗ ಮಾನಸಿಕವಾಗಿ ಕೊರಗಿದ್ದಲ್ಲದೆ ಹೃದಯಾಘಾತದಿಂದ ಪ್ರಾಣ ಬಿಟ್ಟರೆ ಅತ್ತ ವಯಸ್ಸಾದ ತಂದೆಗೆ ಆರೈಕೆ ಮಾಡುವವರಿಲ್ಲದೆ ನರಳಾಡಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ವರದಿಯಾಗಿದೆ.
ಕೊಳೆತ ಸ್ಥಿತಿಯಲ್ಲಿ ತಂದೆ ಹಾಗೂ ಮಗನ ಶವ ಪತ್ತೆಯಾಗಿದೆ. 12 ದಿನಗಳ ಹಿಂದೆಯೇ ಮಗನಿಗೆ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದು, ತಂದೆಗೆ ಪೋಷಣೆ ಮಾಡುವವರಿಲ್ಲದೆ ಅವರೂ ಮನೆಯಲ್ಲೇ ಉಸಿರು ಚೆಲ್ಲಿದ್ದಾರೆ. ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarapet) ತಾಲೂಕಿನ ಎಂವಿ ನಗರದಲ್ಲಿ ಕಳೆದ 12 ದಿನಗಳ ಹಿಂದೆಯೇ ಇಬ್ಬರೂ ಮೃತಪಟ್ಟಿರುವ ಶಂಕೆ ಮೂಡಿದೆ. ಅಕ್ಕ ಪಕ್ಕದ ಮನೆಯವರಿಗೆ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕಳೆದ 6 ತಿಂಗಳ ಹಿಂದೆಯಷ್ಟೇ ತಾಯಿ ತೀರಿಕೊಂಡಿದ್ದು, ತಂದೆ ಮಗ ಇಬ್ಬರು ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದರು. ಎಂವಿ ನಗರದ ವಸಂತರಾಜುಲು (84) ಹಾಗೂ ಸೂರ್ಯ ಪ್ರಕಾಶ್ (40) ಮೃತಪಟ್ಟಿರುವ ತಂದೆ-ಮಗ. ಕಳೆದ 12 ದಿನಗಳ ಹಿಂದೆಯೇ ಇಬ್ಬರು ಮೃತಪಟ್ಟಿರುವ ಶಂಕೆ ಮೂಡಿದೆ. ವಯಸ್ಸಾಗಿದ್ದ ತಂದೆಯನ್ನು ಪೋಷಣೆ ಮಾಡುತ್ತಿದ್ದ ಮಗ ಇಬ್ಬರು ಉಸಿರು ಚೆಲ್ಲಿದ್ದಾರೆ. ಇದನ್ನೂ ಓದಿ: ನಿಫಾ ವೈರಸ್ ಭೀತಿ – ರಾಜ್ಯದ ಗಡಿಯಲ್ಲಿ ಹೈ ಅಲರ್ಟ್, ಕಟ್ಟುನಿಟ್ಟಿನ ತಪಾಸಣೆಗೆ ಸರ್ಕಾರ ಸೂಚನೆ
ಮೊದಲಿಗೆ ಮಗ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಔಷಧ ಸಿಗದೇ ತಂದೆಯೂ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಶ್ವಾನ ದಳ ಸಿಬ್ಬಂದಿ, ಬೆರಳಚ್ಚು ತಜ್ಞರ ತಂಡ ಹಾಗೂ ಕೆಜಿಎಫ್ ಎಸ್‌ಪಿ ಶಾಂತಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವಸಂತರಾಜುಲುಗೆ ಒರ್ವ ಮಗಳಿದ್ದು, ಆಕೆ ಆಮೆರಿಕದಲ್ಲಿದ್ದಾಳೆ. ಹೀಗಾಗಿ ಪಕ್ಕದ ಮನೆಯವರು ನೀಡಿದ ದೂರಿನ ಅನ್ವಯ ಬಂಗಾರಪೇಟೆ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರನ ಬಂಧನ
Web Stories