ಪುನೀತ್‌ ನೆನಪಲ್ಲಿ ಅನದಾನ ಮಾಡಿದ ಅಪ್ಪು ಅಭಿಮಾನಿಗೆ ಭೇಷ್‌ ಎಂದ ಫ್ಯಾನ್ಸ್

Public TV
3 Min Read
PUNEETH RAJKUMAR 5

ಪ್ಪು (Appu) ಸದಾ ಕಣ್ಣ ಮುಂದಿನ ದೀಪ. ಅದು ಯಾವತ್ತೂ ಆರುವುದಿಲ್ಲ. ಅದೆಂಥ ಬಿರುಗಾಳಿ ಬಂದರೂ ಅಲುಗಾಡುವುದಿಲ್ಲ. ಅದಕ್ಕೆ ಆ ಜೀವವನ್ನು ಅಪ್ಪು ಎನ್ನುತ್ತಾರೆ. ಆ ಕನ್ನಡದ ಕಂದ ಮಾಡಿದ ಸಮಾಜ ಸೇವೆಯೆಷ್ಟೋ? ಹಸಿದವರಿಗೆ ಅನ್ನ ಬಡಿಸಿದ್ದೆಷ್ಟೊ? ದೇಹಿ ಎಂದವರಿಗೆ ಕೈ ತುಂಬಾ ಕೊಟ್ಟಿದ್ದೆಷ್ಟೋ? ಈಗ ಅದೇ ನೆನಪಲ್ಲಿ ಆಂಧ್ರ ಪ್ರದೇಶದ ಅಪ್ಪು ಅಭಿಮಾನಿ(Appu Fan) ನಿತ್ಯ ನೂರಾರು ಹಸಿದ ಹೊಟ್ಟೆಗಳಿಗೆ ಅನ್ನ ಕೊಡುತ್ತಿದ್ದಾರೆ. ಏನಿದು ಅಪ್ಪು ಅಭಿಮಾನಿ ಅನ್ನ ದಾನದ ಕಥೆ. ಇಲ್ಲಿದೆ ಮಾಹಿತಿ.

PUNEETH RAJKUMAR 7

ಆ ಕೂಸು ಜೀವಂತ ಇದ್ದಾಗ ಗೊತ್ತಾಗಲಿಲ್ಲ. ಆ ಕೂಸು ಉಸಿರಾಡುತ್ತಿದ್ದಾಗ ಅರಿವಿಗೆ ಬರಲಿಲ್ಲ. ಆ ಕೂಸು ನಡೆದಾಡುತ್ತಿದ್ದಾಗ…ಎರಡು ಕಣ್ಣಿಗೆ ನಿಲುಕಲಿಲ್ಲ. ಬಹುಶಃ ಈ ಗುಣವೇ ಇಂದು ಅವರನ್ನು ದೇವರ ಮುಂದಿನ ನಂದಾದೀಪವಾಗಿಸಿದೆ. ಸೂರ್ಯ ಚಂದ್ರ ಇರೋವರೆಗೂ ಮರೆಯದಂಥ ಪಾಠ ಕಲಿಸಿ ಹೋಗಿದೆ. ಪುನೀತ್ ರಾಜ್‌ಕುಮಾರ್ ಈ ರೀತಿ ನಮ್ಮನ್ನು ಈ ಕ್ಷಣಕ್ಕೂ ಕಾಡುತ್ತಿದ್ದಾರೆ, ಕಂಗಾಲಾಗಿಸುತ್ತಾರೆ, ಬೆರಗು ಮೂಡಿಸುತ್ತಾರೆ. ಕೊನೆಗೆ ನಿಷ್ಕಲ್ಮಶ ನಗುವಿನಿಂದ ಕಣ್ಣ ಪಾಪೆಯಲ್ಲಿ ಹನಿ ನೀರಾಗುತ್ತಾರೆ. ಜೊತೆಗೆ ಇರದ ಜೀವ ಎಂದೆಂದೂ ಜೀವಂತ. ಈ ಸಾಲು ನಮ್ಮ ಹೃದಯ ಬಡಿತವಾಗುವುದು ಹೀಗೆ. ತಾಯಿಯ ಸೀರೆ ಸೆರಗಲ್ಲಿ ಮಲಗಿದ ಹಸಗೂಸಿನ ಹಾಗೆ. ಇದನ್ನೂ ಓದಿ:ಅಕ್ಷಯ್ ನಟನೆಯ ‘ವೆಲ್‌ಕಮ್ 3’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡು

PUNEETH RAJKUMAR 11

ಪುನೀತ್‌ ರಾಜ್‌ಕುಮಾರ್ (Puneeth Rajkumar) ಹೋಗಿ 2 ವರ್ಷ ಸಮೀಪ. ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿ ಮುಂದೆ ನಿತ್ಯ ನೂರಾರು ಜನರು ಹಣತೆ ಬೆಳಗುತ್ತಾರೆ. ಮಗುವಿನ ನಾಮಕರಣ ಮಾಡುತ್ತಾರೆ. ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಾರೆ. ಇದ್ದಾಗ ನೋಡಲಾಗಲಿವಲ್ಲ ಅಣ್ಣಾವ್ರ ಮಗನೇ ಎನ್ನುತ್ತಾ ಬಿಕ್ಕುತ್ತಾರೆ. ಯಾರು ಏನು ಮಾಡಿದರೂ ಅಪ್ಪು ಅದೇ ರಾಜಕುಮಾರನ ನಗೆ ಚೆಲ್ಲುತ್ತಾ ನಿದ್ದೆ ಮಾಡುತ್ತಿದ್ದಾರೆ. ಪಕ್ಕದಲ್ಲಿ ಅಪ್ಪ-ಅಮ್ಮ ಅನಿವಾರ್ಯವಾಗಿ ಜೋಗುಳ ಹಾಡುತ್ತಾರೆ. ಜೀವಂತ ಇರುವ ಇಡೀ ಕರುನಾಡು ದೇವರು ಗೀಚಿದ ಕಪ್ಪು ಅಕ್ಷರಕ್ಕೆ ಹಿಡಿ ಶಾಪ ಹಾಕುತ್ತದೆ. ಆದರೆ ಅಪ್ಪು ಬಿಟ್ಟು ಹೋದ ದಾನ ಧರ್ಮದ ಪಾಠ. ಹೊಸ ದಿಕ್ಕಿಗೆ ದಾರಿ ತೋರಿಸುತ್ತದೆ. ಅದಕ್ಕೆ ಸಾಕ್ಷಿ ಆಂಧ್ರಪ್ರದೇಶ ಅನಂತಪುರದ ರನ್ನ ರೆಡ್ಡಿಯ(Ranna Reddy) ಅನ್ನ ದಾಸೋಹ.

puneeth fan

ಅಪ್ಪು ಕರುನಾಡಿನಲ್ಲಿ ಹುಟ್ಟಿ ಇಲ್ಲೇ ಮಣ್ಣಾದರು. ಆದರೆ ಅವರು ಹೋದ ಮೇಲೆ ನಡೆದ ಮನ್ವಂತರ ಇದೆಯಲ್ಲ. ಅದನ್ನು ಊಹಿಸಿಕೊಳ್ಳಲೂ ಸಾಧ್ಯ ಇಲ್ಲ. ಒಬ್ಬ ವ್ಯಕ್ತಿ ಜೀವಂತ ಇದ್ದಾಗ ಇಷ್ಟೆಲ್ಲ ಮಾಡಿದ್ದರಾ? ಒಂದು ಕೈಯಿಂದ ಕೊಟ್ಟಿದ್ದು ಇನ್ನೊಂದು ಕೈಗೆ ಗೊತ್ತಾಗಬಾರದು. ಹಾಗೆ ಬಿಚ್ಚುಗೈಯಾಗಿ ಬದುಕಿದ್ದರಾ? ಇದೆಲ್ಲವೂ ಹೊರಬಿದ್ದದ್ದು ಅವರು ಲೋಕ ಬಿಟ್ಟು ಹೋದ ಮೇಲೆ. ಅದೇ ಕೋಟಿ ಕೋಟಿ ಜನರಿಗೆ ಸ್ಪೂರ್ತಿಯಾಯಿತು. ಅನ್ನದಾನದಿಂದ ಹಿಡಿದು ನೇತ್ರದಾನವರೆಗೆ. ಮಾದರಿಯಾಯಿತು. ಅದನ್ನೆಲ್ಲ ನೋಡಿಯೇ ರನ್ನ ರೆಡ್ಡಿ ಸಂಜೀವಿನಿ ಟ್ರಸ್ಟ್ ಮೂಲಕ ಅನಂತಪುರದ ಸಾವಿರಾರು ಹಸಿದ ಹೊಟ್ಟೆಗಳಿಗೆ ನಿತ್ಯ ತಾಯಿಯಾಗಿದ್ದಾರೆ. ಬಡವರು, ವೃದ್ಧರು, ಅನಾಥರು ಇವರನ್ನು ಹುಡುಕಿಕೊಂಡು ಹೋಗಿ ತುತ್ತು ತಿನ್ನಿಸಿ ಪುನೀತರಾಗುತ್ತಾರೆ.

ಒಬ್ಬ ವ್ಯಕ್ತಿ ಬಳಿ ಕೋಟಿ ಕೋಟಿ ಹಣ ಇರಬಹುದು. ಆದರೆ ಅದರ ಮುಷ್ಟಿ ಪಾಲನ್ನು ಹಂಚುವ ಗುಣ ಇರದಿದ್ದರೆ ಹೇಗೆ? ಆ ಆಕಾಂಕ್ಷೆ ಇದ್ದಿದ್ದರಿಂದಲೇ ಅಪ್ಪು ನೊಂದವರ ಪಾಲಿಗೆ ದೇವರು ಕೊಟ್ಟ ಮಗನಾದರು. ಅದನ್ನೆಲ್ಲ ನೋಡಿ ಕೇಳಿ ಓದಿಯೇ ರನ್ನ ರೆಡ್ಡಿ ಅನ್ನ ಸಂತರ್ಪಣೆಗೆ ಮನಸು ಮಾಡಿದರು. ಕೈಯಾರೆ ಕಾಸು ಸುರಿದು ಹಸಿದ ಜೀವಗಳಿಗೆ ಅಮೃತ ನೀಡಿದರು. ಅಪ್ಪು ನನ್ನ ಪಾಲಿನ ದೇವರು ಬದುಕು ಕಲಿಸಿದ ಹೆತ್ತವ್ವ ಹೀಗೆ ಹೇಳುತ್ತಾರೆ ಅವರು. ಇದು ನೋಡಿ ಒಬ್ಬ ಮನುಷ್ಯ ಕಲಿಯಬೇಕಾದ ನೀತಿ ಪ್ರೀತಿ. ಇಷ್ಟೆಲ್ಲ ಕೊಟ್ಟು ಕೆಲವನ್ನು ಇಲ್ಲೇ ಬಿಟ್ಟು ಅಪ್ಪು ಆಕಾಶದ ನಕ್ಷತ್ರವಾಗಿದ್ದಾರೆ. ಆ ನಕ್ಷತ್ರದ ಬೆಳಕಿನಲ್ಲಿ ದಾರಿ ಹುಡುಕುತ್ತಾ ನಡೆಯುತ್ತಿದೆ.

Share This Article