ತಮಿಳುನಾಡಿಗೆ ನೀರು ನಿಲ್ಲಿಸದಿದ್ದರೆ ಕಾವೇರಿ ರಕ್ಷಣಾ ಯಾತ್ರೆ: ಬೊಮ್ಮಾಯಿ

Public TV
3 Min Read
BASAVARAJ BOMMAI 1

ಮಂಡ್ಯ: ರಾಜ್ಯ ಸರ್ಕಾರ ತಮಿಳುನಾಡಿಗೆ (Tamil Nadu) ನೀರು (Cauvery water) ಬಿಡುವುದನ್ನು ನಿಲ್ಲಿಸದಿದ್ದರೆ ಸೆ.12ರ ನಂತರ ಕಾವೇರಿ ಕೊಳ್ಳದ ಜಿಲ್ಲೆಗಳ ಜನರೊಂದಿಗೆ ಕಾವೇರಿ ರಕ್ಷಣಾ ಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಎಚ್ಚರಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆಆರ್‍ಎಸ್ (KRS) ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟ ಹಾಗೂ ವಾಸ್ತವ ಸ್ಥಿತಿ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೇ ಹಾಗೂ ಜೂನ್ ತಿಂಗಳ ಪ್ರಾರಂಭದಲ್ಲಿಯೇ ಈ ವರ್ಷ ಮಳೆ ಕೊರತೆಯಾಗಿರುವುದು ಗೊತ್ತಾಗಿದೆ. ಆದರೂ ಸರ್ಕಾರ ಸಂಪೂರ್ಣವಾಗಿ ಕಾವೇರಿ ವ್ಯಾಪ್ತಿಯ ನಾಲ್ಕು ಡ್ಯಾಮ್‍ಗಳ ನಿರ್ವಹಣೆಯಲ್ಲಿ ವಿಫಲವಾಗಿದೆ. ಕುಡಿಯುವ ನೀರಿಗೆ ಅನುಕೂಲವಾಗಲು ಕೆರೆಗಳಿಗೆ ರೈತರ ಹೊಲಗಳಿಗೆ ಜೂನ್ ತಿಂಗಳಲ್ಲಿ ನೀರು ಬಿಡಬೇಕಿತ್ತು. ಐಸಿಸಿ ಮೀಟಿಂಗ್ ಜೂನ್‍ನಲ್ಲಿ ಕರೆಯುವ ಬದಲು ಆಗಸ್ಟ್‌ನಲ್ಲಿ ಕರೆದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮದು ಆಪರೇಷನ್ ಅಲ್ಲ ಕೋ ಅಪರೇಷನ್ ಸ್ನೇಹದ ಹಸ್ತ: ಡಿಕೆಶಿ

ತಮಿಳುನಾಡಿನವರು 15,000 ಕ್ಯೂಸೆಕ್ ನೀರು ಕೇಳಿದ ಮೇಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ಕಾಲಹರಣ ಮಾಡಿದೆ. ಅವರು ಕುರುವೈ ಬೆಳೆಗೆ ಈಗಾಗಲೇ 32 ಟಿಎಂಸಿ ಬದಲು 60 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾರೆ. ಆದರೂ ಅವರ ಬೇಡಿಕೆಯಂತೆ ಪ್ರತಿದಿನ ನೀರು ಹರಿಸುತ್ತಿದ್ದಾರೆ. ಈ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಕೇಳಿದಾಗ ಇನ್ನು ಮುಂದೆ ನೀರು ಬಿಡುವುದಿಲ್ಲ ಎಂದಿದ್ದರು. ಆದರೂ ನಿರಂತರ ನೀರು ಹರಿಸುತ್ತಿದ್ದಾರೆ. ಸಿಡಬ್ಲುಎಂಎ ಎದುರು ಸರಿಯಾಗಿ ವಾದ ಮಾಡಿದ್ದರೆ ಸುಮಾರು 15 ಟಿಎಂಸಿ ನೀರು ಉಳಿಯುತ್ತಿತ್ತು ಎಂದಿದ್ದಾರೆ.

ರಾಜ್ಯ ಸರ್ಕಾರ ಸೆ.12ರ ನಂತರ ನೀರು ಬಿಡುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ವಿಚಾರಣೆ ನಡೆಯುವವರೆಗೂ ನೀರು ಹರಿಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾವೇರಿ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 4 ಲಕ್ಷ ಎಕರೆ ಬೆಳೆ ಒಣಗುತ್ತಿದೆ. ಕೃಷಿ ಅಧಿಕಾರಿಗಳು ಒಣ ಬೇಸಾಯದ ಬೆಳೆ ಬೆಳೆಯುವಂತೆ ಸೂಚನೆ ನೀಡುತ್ತಿದ್ದಾರೆ. ಆದರೂ ತಮಿಳುನಾಡಿನ ಬೆಳೆಗೆ ನೀರು ಹರಿಸುತ್ತಿದ್ದಾರೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಈ ಕಡೆಗೆ ಗಮನ ಹರಿಸಿಲ್ಲ. ಸಿಎಂ ನೀರು ಬಿಡುವುದಿಲ್ಲ ಎಂದು ಹೇಳಿದ 24 ಗಂಟೆಯಲ್ಲಿ ಆದೇಶ ಇದೆ ನೀರು ಬಿಟ್ಟಿದ್ದೇವೆ ಎಂದು ಡಿಸಿಎಂ ಹೇಳುತ್ತಾರೆ. ಕೆಆರ್‍ಎಸ್ ಡ್ಯಾಮ್‍ನಲ್ಲಿ ಕೇವಲ 13 ಟಿಎಂಸಿ ನೀರು ಮಾತ್ರ ಬಳಕೆಗೆ ಇದೆ. ಮುಂದಿನ ಮೇ ವರೆಗೂ ಇನ್ನೂ ಎರಡು ಟಿಎಂಸಿ ನೀರು ಆವಿಯಾಗಿ ಹೋಗುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯದ ಜನರು ಇದನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.

ರಾಜ್ಯ ಸರ್ಕಾರ ಇದುವರೆಗೂ ನಮ್ಮ ರೈತರಿಗೆ 33 ಟಿಎಂಸಿ ನೀರು ಬಿಡಬೇಕಿತ್ತು. ಕೇವಲ 7 ಟಿಎಂಸಿ ನೀರು ಬಿಟ್ಟಿದ್ದಾರೆ. ನಮ್ಮ ರೈತರು ಎಲ್ಲಿಗೆ ಹೋಗಬೇಕು? ಕಾವೇರಿ ಭಾಗದ ಜನರು ನಿಮಗೆ ಬಹುಮತ ನೀಡಿದ್ದಾರೆ. ಅವರಿಗೆ ಇದೇ ಬಹುಮಾನಾನಾ ಎಂದು ಪ್ರಶ್ನಿಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಮೇಕೆದಾಟು ಬಗ್ಗೆ ಹೇಳಿದ್ದಾರೆ. ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಕಾರ್ಪೋರೇಷನ್‌ನವರು ವಿದ್ಯುತ್ ಉತ್ಪಾದನೆಗೆ ನಾಲ್ಕು ಡ್ಯಾಮ್‍ಗಳಿಗೆ ಅನುಮತಿ ನೀಡಿದ್ದರು. ಆದರೆ ತಮಿಳುನಾಡು ವಿರೋಧ ಮಾಡಿದೆ. ನಾನು 2012 ರಲ್ಲಿ ನೀರಾವರಿ ಸಚಿವನಾಗಿದ್ದಾಗ ಮೇಕೆದಾಟು ಯೋಜನೆ ಮಾಡಲು ತೀರ್ಮಾನಿಸಿ ಫಿಜಿಬಿಲಿಟಿ ರಿಪೋರ್ಟ್ ಸಿದ್ಧ ಪಡಿಸಿದ್ದೆವು. ಡಿಪಿಆರ್ ತಯಾರಿಸುವ ಸಂದರ್ಭದಲ್ಲಿ ಕಾಂಗ್ರೆಸ್‍ನವರು ಮೇಕೆದಾಟು ಪಾದಯಾತ್ರೆ ಮಾಡಿದರು. ಪ್ರಕರಣ ಕೊರ್ಟ್‍ನಲ್ಲಿದೆ ಎಂದು ಹೇಳಿದಾಗ ಒಪ್ಪಲಿಲ್ಲ. ಈಗ ಅವರೇ ಸತ್ಯ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ರೈತ ಸಂಘದವರು ಕಾವೇರಿ ರಕ್ಷಣೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ರಾಜಕಾರಣ ಮಾಡಬಾರದು ಎಂದು ಕಾದು ನೋಡಿದೆವು. ಸಿಡಬ್ಲುಸಿ ಸಭೆ ಕರೆಯುವ ಮೊದಲು ನಾನು ಸಿಎಂಗೆ ಪತ್ರ ಬರೆದಿದ್ದೆ. ಸರ್ವಪಕ್ಷ ಸಭೆ ಕರೆಯುವಂತೆ ಒತ್ತಡ ಹೇರಿದ್ದೇವೆ. ಸರ್ಕಾರ ಈಗಲೂ ನೀರು ಹರಿಸುವುದನ್ನು ತಡೆಯುವಂತೆ ಒತ್ತಡ ಹೇರಲು ವಸ್ತುಸ್ಥಿತಿ ಅರಿಯಲು ಬಂದಿದ್ದೇನೆ. ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನೋಡಿದರೆ ತಮಿಳುನಾಡಿನ ಓಲೈಕೆಗೆ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ವೇಳೆ ಮಾಜಿ ಸಚಿವ ಗೋವಿಂದ ಕಾರಜೋಳ, ಆರ್. ಅಶೋಕ್, ಡಾ.ಅಶ್ವಥ್ ನಾರಾಯಣ್, ಕೆ. ಗೋಪಾಲಯ್ಯ, ಸಂಸದೆ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ ಇದ್ದರು. ಇದನ್ನೂ ಓದಿ: ಶಿವಾನಂದ ಪಾಟೀಲ್‍ಗೆ ಒಂದು ಕೋಟಿ ರೂ. ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ತಾರಾ?: ಬಿ.ಸಿ ಪಾಟೀಲ್

Web Stories

Share This Article