ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

Public TV
3 Min Read
adani

ನವದೆಹಲಿ: ಹಿಂಡೆನ್‌ಬರ್ಗ್ ಸಂಶೋಧನಾ ವರದಿ (Hindenburg Research Report) ಬಿಡುಗಡೆಯಾಗುವ ಸಮಯದಲ್ಲಿ ಅದಾನಿ (Adani) ಸಮೂಹದ ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ (Short Selling ) ಮಾಡುವ ಮೂಲಕ ಒಂದು ಖಾಸಗಿ ಬ್ಯಾಂಕ್‌ ಸೇರಿದಂತೆ 16 ಸಂಸ್ಥೆಗಳು ಭಾರೀ ಲಾಭ ಮಾಡಿರುವ ವಿಷಯ ಜಾರಿ ನಿರ್ದೇಶನಾಲಯದ (ED) ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPIs/FIIs) ಸೇರಿದಂತೆ ಒಂದು ಡಜನ್ ಕಂಪನಿಗಳು ಅದಾನಿ ಗ್ರೂಪ್‌ನ ಷೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿರುವ ವಿಷಯ ಇಡಿ ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಲಾಭ ಮಾಡಿದ ಸಂಸ್ಥೆಗಳ ಪೈಕಿ ಮೂರು ಭಾರತದಲ್ಲಿ ನೆಲೆಗೊಂಡಿದ್ದರೆ, ನಾಲ್ಕು ಮಾರಿಷಸ್‌, ಮತ್ತು ಫ್ರಾನ್ಸ್, ಹಾಂಕಾಂಗ್‌, ಕೇಮನ್ ದ್ವೀಪಗಳು, ಐರ್ಲೆಂಡ್ ಮತ್ತು ಲಂಡನ್‌ನಲ್ಲಿ ತಲಾ ಒಂದು ಸಂಸ್ಥೆಗಳು ನೆಲೆಗೊಂಡಿವೆ ಎಂದು ಇಡಿ ತನ್ನ ವರದಿಯಲ್ಲಿ ಹೇಳಿದೆ. ಇದನ್ನೂ ಓದಿ: ಇದು ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ – ಆರೋಪಗಳಿಗೆ 413 ಪುಟಗಳ ಉತ್ತರ ನೀಡಿದ ಅದಾನಿ ಗ್ರೂಪ್‌

Hindenburg 1

ಹಿಂಡೆನ್‌ಬರ್ಗ್‌ ವರದಿ ಜನವರಿ 24ರಂದು ಪ್ರಕಟವಾಗಿತ್ತು. ವರದಿ ಪ್ರಕಟವಾಗುವ 2-3 ದಿನಗಳ ಹಿಂದೆ ಕೆಲ ಕಂಪನಿಗಳು ಶಾರ್ಟ್‌ ಸೆಲ್ಲಿಂಗ್‌ ಮಾಡಿವೆ. ಅದರಲ್ಲೂ ಕೆಲ ಕಂಪನಿಗಳು ಇದೇ ಮೊದಲ ಬಾರಿಗೆ ಶಾರ್ಟ್‌ ಸೆಲ್ಲಿಂಗ್‌ ಮಾಡಿದೆ ಎಂದು ಇಡಿ ಜುಲೈನಲ್ಲಿ ಸಲ್ಲಿಸಿದ ತನಿಖಾ ವರದಿಯಲ್ಲಿ ಸೆಬಿಗೆ (SEBI) ತಿಳಿಸಿದೆ. ಎರಡು ಭಾರತೀಯ ಕಂಪನಿಗಳು ‘ಟಾಪ್ ಶಾರ್ಟ್ ಸೆಲ್ಲರ್’ಗಳಲ್ಲಿ ಕಾಣಿಸಿಕೊಂಡಿವೆ. ಈ ಪೈಕಿ ಒಂದು ದೆಹಲಿಯಲ್ಲಿ ಮತ್ತು ಇನ್ನೊಂದು ಮುಂಬೈನಲ್ಲಿ ನೋಂದಾಯಿಸಲಾಗಿದೆ.

ಕಡಿಮೆ ಅವಧಿಯಲ್ಲಿ ಲಾಭ ಮಾಡಿದ 16 ಸಂಸ್ಥೆಗಳ ಮೇಲೆ ಸದ್ಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸಂಸ್ಥೆಗಳ ಮೇಲೆ ಕ್ರಿಮಿನಲ್‌ ತನಿಖೆ ನಡೆಸುವ ಸಂಪೂರ್ಣ ಅಧಿಕಾರ ಸೆಬಿಗೆ ಇದ್ದು ಒಂದು ವೇಳೆ ಅನುಮಾನಾಸ್ಪದ ವ್ಯವಹಾರ ನಡೆದಿದ್ದರೆ ದೂರು ದಾಖಲಿಸಬಹುದು. ದೂರು ದಾಖಲಾದ ಬಳಿಕ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿ ಇಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

SEBI

ಏನಿದು ಶಾರ್ಟ್‌ ಸೆಲ್ಲಿಂಗ್‌?
ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್‌ ಸೆಲ್ಲಿಂಗ್‌ ಎಂದು ಕರೆಯಲಾಗುತ್ತದೆ.

ಲಾಭ ಮಾಡಿರುವ ಒಂದು ಸಂಸ್ಥೆ 2020ರಲ್ಲಿ ಆರಂಭಗೊಂಡಿದ್ದರೂ 2021 ರವರೆಗೆ ನಿಷ್ಕ್ರಿಯವಾಗಿತ್ತು. ಹೀಗಿದ್ದರೂ ಇದು ಸೆಪ್ಟೆಂಬರ್ 2021 ರಿಂದ ಮಾರ್ಚ್ 2022 ರವರೆಗಿನ ಕೇವಲ ಆರು ತಿಂಗಳೊಳಗೆ 31,000 ಕೋಟಿ ರೂ. ವಹಿವಾಟಿನ ಮೇಲೆ 1,100 ಕೋಟಿ ರೂಪಾಯಿಗಳ ಗಳಿಕೆಯನ್ನು ಘೋಷಿಸಿದೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

ಭಾರತದಲ್ಲಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಹಣಕಾಸು ಸೇವೆಗಳ ಗುಂಪು 122 ಕೋಟಿ ರೂಪಾಯಿಗಳ ಅಲ್ಪ ಆದಾಯವನ್ನು ದಾಖಲಿಸಿದೆ. ಹೀಗಿದ್ದರೂ ಎಫ್‌ಐಐ ಆಗಿ ಯಾವುದೇ ತೆರಿಗೆ ಹೊಣೆಗಾರಿಕೆಯಿಲ್ಲದೆ 9,700 ಕೋಟಿ ರೂ. ಆದಾಯಗಳಿಸಿ ಅಚ್ಚರಿ ಮೂಡಿಸಿದೆ ಎಂದು ಇಡಿ ಹೇಳಿದೆ.

ಈ ಎಫ್‌ಪಿಐಗಳು ಮತ್ತು ಎಫ್‌ಐಐಗಳು ನಿಜವಾದ ಫಲಾನುಭವಿಗಳಲ್ಲ. ಇವುಗಳು ವಿದೇಶಿ ಹೂಡಿಕೆದಾರರರಿಗೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿರಬಹುದು ಎಂದು ಇಡಿ ಸಂಶಯ ವ್ಯಕ್ತಪಡಿಸಿದೆ.

Gautam Adani

ಅದಾನಿಯಿಂದ ಎಫ್‌ಪಿಒ ರದ್ದು:
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ ಈ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು.

ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article