Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

Public TV
3 Min Read
nagara panchami 8

ನಾಗರಪಂಚಮಿ (Nagara Panchami) ಹಬ್ಬವನ್ನು ಭಾರತದ ಬಹುತೇಕ ಭಾಗಗಳಲ್ಲಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ವಿಶೇಷವಾಗಿ ನಾಗ ದೇವರನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ (Maharashtra) ಈ ಹಬ್ಬವನ್ನು ಮಳೆಗಾಲದ ಸಮಯದಲ್ಲಿ ಅಂದರೆ ಶ್ರಾವಣ ಮಾಸದ 5ನೇ ದಿನದಂದು ಆಚರಿಸಲಾಗುತ್ತದೆ. ಹಾವುಗಳನ್ನು ಪೂಜಿಸುವ ಮೂಲಕ ಅವುಗಳಿಂದ ರಕ್ಷಣೆ ಪಡೆಯುವುದೇ ಈ ಹಬ್ಬದ ಮಹತ್ವ. ಹಾಗಿದ್ರೆ ಮಹಾರಾಷ್ಟ್ರದಲ್ಲಿ ಇದನ್ನು ಯಾವ ರೀತಿ ಆಚರಿಸುತ್ತಾರೆ ಎಂಬುದರ ಬಗ್ಗೆ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ನಾಗರಪಂಚಮಿಗೆ ತನ್ನದೇ ಆದ ಐತಿಹ್ಯವಿದೆ. ದ್ವಾಪರಯುಗದಲ್ಲಿ ಭಗವಾನ್ ಕೃಷ್ಣ ಐದು ತಲೆಯನ್ನು ಹೊಂದಿದ್ದ ಅತ್ಯಂತ ವಿಷಕಾರಿ ಕಾಳಿಂಗ ಹಾವನ್ನು ಸೋಲಿಸಿ, ಆ ಗ್ರಾಮದ ಜನರಿಗೆ ಅದರ ಕಾಟದಿಂದ ಮುಕ್ತಿ ಕೊಡಿಸಿದ ಬಳಿಕ ನಾಗರ ಪಂಚಮಿ ಹಬ್ಬವನ್ನು ಪ್ರಾರಂಭಿಸಲಾಯಿತು ಎಂದು ಪುರಾಣಗಳು ಹೇಳುತ್ತವೆ. ಇದನ್ನೂ ಓದಿ: Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!

nagara panchami 2 1

ನಾಗರ ಪಂಚಮಿ ಹಬ್ಬದ ದಿನದಂದು ಮಹಾರಾಷ್ಟ್ರದ ಜನರು ಹಾವುಗಳಿಗೆ ಜೇನುತುಪ್ಪ ಮತ್ತು ಕುಂಕುಮವನ್ನು ಬೆರೆಸಿದ ಹಾಲನ್ನು ಎರೆದು ಪೂಜೆ ಮಾಡುತ್ತಾರೆ. ಶಿರಾಲೆ (Shirale) ಎಂಬ ಸ್ಥಳದಲ್ಲಿ ನಾಗರಪಂಚಮಿ ಹಬ್ಬ ಪ್ರಾರಂಭವಾಗುವ ಒಂದು ವಾರದ ಮೊದಲೇ ಜನರು ಕಾಡಿನಿಂದ ಹಾವುಗಳನ್ನು ಹಿಡಿದು ತಂದು ಹಬ್ಬದ ದಿನದಂದು ಹಾವುಗಳಿಗೆ ಹಾಲೆರೆಯುತ್ತಾರೆ. ಇನ್ನೊಂದು ವಿಶೇಷವೇನೆಂದರೆ ನಾಗರಪಂಚಮಿ ದಿನದಂದು ಜನರು ಹಾವಿನೊಂದಿಗೆ ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತಾರೆ.

ನಾಗರಪಂಚಮಿ ಹಬ್ಬವನ್ನು ಮುಖ್ಯವಾಗಿ ಎರಡು ಕಾರಣಗಳಿಗೆ ಆಚರಿಸಲಾಗುತ್ತದೆ. ಮೊದಲನೆಯದಾಗಿ ಕುಟುಂಬದ ಯೋಗಕ್ಷೇಮಕ್ಕಾಗಿ ನಾಗದೇವರ ಆಶೀರ್ವಾದವನ್ನು ಪಡೆಯಲಾಗುತ್ತದೆ. ಎರಡನೆಯದಾಗಿ ನಾಗಗಳು ರೈತರು ಬೆಳೆದ ಬೆಳೆಗಳನ್ನು ಕ್ರಿಮಿ, ಕೀಟಗಳು ಹಾಗೂ ಇಲಿಗಳಿಂದ ರಕ್ಷಿಸುತ್ತವೆ. ಆದ್ದರಿಂದ ರೈತರು ನಾಗದೇವರನ್ನು ಪೂಜಿಸಿ ಕೃತಜ್ಞತೆಯನ್ನು ಸಲ್ಲಿಸುವ ದಿನವೇ ಈ ನಾಗರಪಂಚಮಿ ಹಬ್ಬ. ಈ ದಿನದಂದು ಹಾವಾಡಿಗರು ತಮ್ಮ ಬುಟ್ಟಿಗಳಲ್ಲಿ ಹಾವುಗಳನ್ನು ಕೊಂಡೊಯ್ದು ಬೀದಿ ಬದಿಯಲ್ಲಿ ಹಾವನ್ನು ಕುಣಿಸುವುದರ ಮೂಲಕ ಜನರಿಂದ ಹಣವನ್ನು ಗಳಿಸುತ್ತಾರೆ. ನಾಗದೇವರು ಶಿವನೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದರಿಂದ ನಾಗರಪಂಚಮಿ ದಿನದಂದು ನಾಗದೇವಾಲಯಗಳು ಹಾಗೂ ಶಿವನ ದೇವಸ್ಥಾನಗಳಿಗೆ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

nagara panchami 1 1

ಶಿರಾಲೆಯಲ್ಲಿ ಹಬ್ಬಕ್ಕೂ ಮೊದಲೇ ಹಾವನ್ನು ಹಿಡಿದು ತಂದು ಅವುಗಳಿಗೆ ಆಹಾರವನ್ನು ನೀಡಿ ಪೋಷಿಸುತ್ತಾರೆ. ನಾಗರಪಂಚಮಿಯ ಮುನ್ನಾ ದಿನದಂದು ಗ್ರಾಮದ ಯುವಕರು ತಮ್ಮ ತಲೆಯ ಮೇಲೆ ಮಡಕೆಗಳನ್ನು ಹೊತ್ತುಕೊಂಡು ಅಂಬಾ ದೇವಸ್ಥಾನಕ್ಕೆ ತೆರಳುತ್ತಾರೆ. ಬಳಿಕ ಹಾವುಗಳನ್ನು ದೇವಾಲಯದ ಅಂಗಳಕ್ಕೆ ಬಿಡುವ ಮೊದಲು ಅವುಗಳಿಗೆ ಪೂಜೆ ಸಲ್ಲಿಸಿ, ಅರಶಿನ ಸಿಂಪಡಿಸಿ, ಜೇನುತುಪ್ಪ ಮತ್ತು ಹಾಲನ್ನು ಅರ್ಪಿಸಲಾಗುತ್ತದೆ. ಇದನ್ನೂ ಓದಿ: Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!

ದೇವಾಲಯದಲ್ಲಿ ಉತ್ಸವ ಅಥವಾ ಪೂಜೆ ಮುಗಿದ ಬಳಿಕ ಮತ್ತೆ ಹಾವುಗಳನ್ನು ಹಿಡಿದು ಮೆರವಣಿಗೆ ಹೊರಡುತ್ತಾರೆ. ಈ ಉತ್ಸವವನ್ನು ನೋಡಲು ಮಹಿಳೆಯರು ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿರುತ್ತಾರೆ. ಮೆರವಣಿಗೆ ಸಂದರ್ಭದಲ್ಲಿಯೇ ಅನೇಕರು ಹಾವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಇದಾದ ಬಳಿಕ ಹಬ್ಬದ ಮರುದಿನ ಹಾವುಗಳನ್ನು ಕಾಡಿಗೆ ಬಿಡಲಾಗುತ್ತದೆ.

ಬತ್ತೀಸ್ ಶಿರಾಲೆ ಕೊಲ್ಲಾಪುರ ಜಿಲ್ಲೆಯಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿದ್ದು, ನಾಗರಪಂಚಮಿಯನ್ನು ಆಚರಿಸುವ ಜನಪ್ರಿಯ ಸ್ಥಳವಾಗಿದೆ. ಈ ಗ್ರಾಮವು ವಿಶಾಲವಾದ ಅರಣ್ಯ ಪ್ರದೇಶವನ್ನು ಹೊಂದಿದ್ದು, ವಿಭಿನ್ನ ಮತ್ತು ದೊಡ್ಡ ಜಾತಿಯ ಸರ್ಪಸಂಕುಲವನ್ನು ಹೊಂದಿದೆ. ಈ ಗ್ರಾಮದಲ್ಲಿ ನಾಗರಪಂಚಮಿ ಹಬ್ಬವನ್ನು 8ರಿಂದ 10 ದಿನಗಳ ಕಾಲ ಆಚರಿಸುತ್ತಾರೆ. ಮಳೆಗಾಲದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಹಾವಿನ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲದೇ ಹಾವುಗಳನ್ನು ತಮ್ಮ ಸ್ನೇಹಿತ ಎಂದು ಅಲ್ಲಿನ ರೈತರು ನಂಬುತ್ತಾರೆ. ಇದನ್ನೂ ಓದಿ: Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article