ಕರ್ನಾಟಕ ಕಾವೇರಿ ನೀರು ಬಿಡುತ್ತಿಲ್ಲ: ಸುಪ್ರೀಂ ಮೊರೆ ಹೋದ ತಮಿಳುನಾಡು

Public TV
2 Min Read

– 28.84 ಟಿಎಂಸಿ ನೀರು ಕೂಡಲೇ ಹರಿಸಲು ನಿರ್ದೇಶನ ನೀಡಿ

ನವದೆಹಲಿ: ಕಾವೇರಿ ನೀರಿಗಾಗಿ (Cauvery Water) ಕರ್ನಾಟಕ ಮತ್ತು ತಮಿಳುನಾಡು (Tamil Nadu) ಮಧ್ಯೆ ಮತ್ತೆ ಕಾನೂನು ಹೋರಾಟ ಆರಂಭವಾಗಿದೆ. ಜೂನ್ ಮತ್ತು ಜುಲೈ ಅವಧಿಯ 28.84 ಟಿಎಂಸಿ ನೀರು ಕೂಡಲೇ ಹರಿಸಲು ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದೆ.

113 ಪುಟಗಳ ವಿಸ್ತೃತ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಸುಪ್ರೀಂಕೋರ್ಟ್ ಹಿಂದಿನ ಆದೇಶದಂತೆ ಕರ್ನಾಟಕ (Karnataka) ಸರಿಯಾದ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಈ ವರ್ಷ ಜೂನ್ ಮತ್ತು ಜುಲೈ ತಿಂಗಳ ನೀರು ಬಾಕಿ ಉಳಿಸಿಕೊಂಡಿದೆ. ಅಲ್ಲದೇ ಅಗಸ್ಟ್ ತಿಂಗಳ ನೀರು ಹರಿಸಬೇಕಿದೆ. ಆದರೆ ನೀರು ಬಿಡದೇ ಕರ್ನಾಟಕ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದೆ.  ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲ್ತಾರೆ: ಸಂಜಯ್‌ ರಾವತ್‌

KRS MANDYA 1

ಅರ್ಜಿಯಲ್ಲಿ ಪೂರಕವಾಗಿ ನೀರು ಹರಿಸಲು ನಿರ್ದೇಶನ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಬರೆದ ಪತ್ರವನ್ನು ಲಗತ್ತಿಸಲಾಗಿದೆ.

ತಮಿಳುನಾಡು ಒಪ್ಪಿಗೆ ಪಡೆಯದೇ ನಿತ್ಯ 10 ಸಾವಿರ ಕ್ಯೂಸೆಕ್ ನಂತೆ ಹದಿನೈದು ದಿನಗಳ ಕಾಲ ನೀರು ಹರಿಸಬೇಕು ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿದೆ. ಆ ದೇಶವನ್ನು ಪಾಲಿಸಿಲ್ಲ ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಆರೋಪಿಸಿದೆ. ನೀರಿನ ಕೊರತೆಯಿಂದ ರೈತರಿಗೆ ತೊಂದರೆಯಾಗುತ್ತಿದ್ದು ಕೋರ್ಟ್ ಮಧ್ಯ ಪ್ರವೇಶ ಮಾಡಿ ನೀರು ಹರಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದೆ.

ಯಾವ ತಿಂಗಳಿನಲ್ಲಿ ಎಷ್ಟು ಟಿಎಂಸಿ ನೀರು ಬಿಡಬೇಕು?
ನ್ಯಾಯಾಧೀಕರಣದ ಆದೇಶವನ್ನು ಸುಪ್ರೀಂಕೋರ್ಟ್‌ ಫೆ. 16, 2018ರಂದು ಮಾರ್ಪಾಡುಗೊಳಿಸಿದ ಬಳಿಕ ಜೂನ್‌ 9.19, ಜುಲೈ 31.24, ಆಗಸ್ಟ್‌ 45.95, ಸೆಪ್ಟೆಂಬರ್‌ 36.76, ಅಕ್ಟೋಬರ್‌ 20.22, ನವೆಂಬರ್‌ 13.78, ಡಿಸೆಂಬರ್‌ 7.35, ಜನವರಿ 2.76 ಟಿಎಂಸಿ ನೀರನ್ನು ಬಿಡಬೇಕು. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 123.14 ಟಿಎಂಸಿ ಅಕ್ಟೋಬರ್‌ನಿಂದ ಜನವರಿವರೆಗೆ 44.11 ಟಿಎಂಸಿ ಹರಿಸಬೇಕು. ಜೂನ್‌ನಿಂದ ಜನವರಿವರೆಗೆ ಒಟ್ಟು 167.25 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿನ ಬಿಳಿಗುಂಡ್ಲುಗೆ ಹರಿಸಬೇಕು.

Web Stories

Share This Article