ತಾಲಿಬಾನ್‌ ಉಗ್ರರಿಗೆ ಪಾಕ್‌ ಮೇಲೆ ಸಿಟ್ಯಾಕೆ?

Public TV
6 Min Read
Taliban Vs Pakistan Why are Afghanistan and Pakistan enemies 1

ಗ್ರರನ್ನು ಸೃಷ್ಟಿಸಿ, ಬೆಳೆಸಿ, ಪೋಷಿಸಿ ಭಾರತದ (India) ವಿರುದ್ಧ ಛೂ ಬಿಡುತ್ತಿದ್ದ ಪಾಕಿಸ್ತಾನದ (Pakistan) ಮೇಲೆ ಈಗ ಉಗ್ರರೇ ದಾಳಿ ಮಾಡುತ್ತಿದ್ದಾರೆ. ಅಂದು ತಾಲಿಬಾನ್ (Taliban) ಉಗ್ರರಿಗೆ ರಾಜಾಶ್ರಯ ನೀಡಿದ್ದ ಪಾಕಿಸ್ತಾನ ಈಗ ಅದೇ ಉಗ್ರರಿಂದ ಸಂಕಷ್ಟ ಅನುಭವಿಸುತ್ತಿದೆ. ಹೀಗಾಗಿ ಇಲ್ಲಿ ಪಾಕ್ ವಿರುದ್ಧ ತಾಲಿಬಾನ್‌ ಉಗ್ರರು ಹೋರಾಟ ಮಾಡುತ್ತಿರುವುದು ಯಾಕೆ? ಪಾಕ್ ಸರ್ಕಾರ ಉಗ್ರರನ್ನು ಮಟ್ಟ ಹಾಕಲು ವಿಫಲವಾಗಿದ್ದು ಯಾಕೆ ಎಂಬ ವಿವರವನ್ನು ನೀಡಲಾಗಿದೆ.

ಮೊದಲು ಅಫ್ಘಾನಿಸ್ತಾನ ಹೇಗಿತ್ತು?
ಎರಡನೇ ವಿಶ್ವಯುದ್ಧದ ಬಳಿಕ ಅಫ್ಘಾನಿಸ್ತಾನ (Afghanistan) ಸೋವಿಯತ್‌ ಯೂನಿಯನ್‌ ಜೊತೆ ಉತ್ತಮ ಸಂಬಂಧ ಹೊಂದಿತ್ತು. ಸೋವಿಯತ್‌ ಯೂನಿಯನ್‌ (Soviet Union) ಆರ್ಥಿಕ, ಮಿಲಿಟರಿ, ಸಹಕಾರವನ್ನು ನೀಡಿತ್ತು. ಶೀತಲ ಸಮರದ ಸಮಯದಲ್ಲಿ ಅಫ್ಘಾನ್‌- ಯುಎಸ್‌ಎಸ್‌ಆರ್‌ ಸಂಬಂಧ ಉತ್ತಮವಾಗುತ್ತಿರುವುದನ್ನು ಸಹಿಸದ ಅಮೆರಿಕ (America) ಪಾಕಿಸ್ತಾದಲ್ಲಿ ಮುಜಾಹಿದ್ದೀನ್‌ಗಳ ಕೈಗೆ ಶಸ್ತ್ರಾಸ್ತ್ರ ನೀಡಿ ಬೆಳೆಸತೊಡಗಿತು. ಅಮೆರಿಕದ ಈ ತಂತ್ರಕ್ಕೆ ಪಾಕಿಸ್ತಾನದ ಐಎಸ್‌ಐ ಸಾಥ್‌ ನೀಡಿತು.

Taliban Pakistan Why are Afghanistan and Pakistan enemies 6

ಈ ನಿರ್ಧಾರದಿಂದ ಅಮೆರಿಕಕ್ಕೆ ಎರಡು ಲಾಭವಿತ್ತು. ಒಂದನೇಯದಾಗಿ ಅಮೆರಿಕದ ಸೈನಿಕರು ಅಫ್ಘಾನಿಸ್ತಾನಕ್ಕೆ ಹೋಗಿ ನೇರವಾಗಿ ಯುದ್ಧ ಮಾಡದ ಕಾರಣ ಸೈನಿಕರ ಸಾವು, ನೋವು ಸಂಭವಿಸುವುದಿಲ್ಲ. ಎರಡನೇಯದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವೂ ಬರುವುದಿಲ್ಲ. ಅಮೆರಿಕ ಕೃಪಾಪೋಷಿತ ಉಗ್ರರು ಸೋವಿಯತ್‌ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಗೆರಿಲ್ಲಾ ಯುದ್ಧಗಳನ್ನು ಮಾಡಲು ಆರಂಭಿಸಿದರು. ಕೊನೆಗೆ 1989ರಲ್ಲಿ ಸೋವಿಯತ್‌ ಯೂನಿಯನ್‌ ಅಫ್ಘಾನಿಸ್ತಾನದಲ್ಲಿದ್ದ ಎಲ್ಲ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. 1991ರಲ್ಲಿ ಯುಎಸ್‌ಎಸ್‌ಆರ್‌ ಛಿದ್ರಗೊಳ್ಳುವ ಮೂಲಕ ಅಮೆರಿಕದ ತಂತ್ರ ಯಶಸ್ವಿಯಾಯಿತು.  ಇದನ್ನೂ ಓದಿ: ದೇಶದ್ರೋಹ ಕಾನೂನು ರದ್ದು: ಅಮಿತ್ ಶಾ ಮಸೂದೆ ಮಂಡನೆ

ಅಮೆರಿಕದ ಮೇಲೆ ಕೆಂಗಣ್ಣು
ಶೀತಲ ಸಮರದಲ್ಲಿ ಗೆದ್ದ ಅಮೆರಿಕ ಪ್ಯಾಲೆಸ್ಟೀನ್‌ (Palestine) ವಿಚಾರದಲ್ಲಿ ಇಸ್ರೇಲ್‌ಗೆ (Israel) ಬೆಂಬಲ ನೀಡಿತ್ತು. ಅಷ್ಟೇ ಅಲ್ಲದೆ ಇರಾಕ್‌ (Iraq) ಮೇಲೆ ವ್ಯಾಪಾರ ನಿರ್ಬಂಧ ಹೇರಿತು. ಇದು ಅಮೆರಿಕವೇ ಸೃಷ್ಟಿಸಿದ್ದ ಜಿಹಾದಿಗಳ ಸಿಟ್ಟಿಗೆ ಕಾರಣವಾಯಿತು. ಈ ಎಲ್ಲಾ ಉಗ್ರ ಸಂಘಟನೆ ಒಂದಾಗಿ ಅಲ್ ಖೈದಾ ಸಂಘಟನೆ ಸೃಷ್ಟಿಯಾಯಿತು ಒಸಾಮಾ ಬಿನ್ ಲಾಡೆನ್ (Osama bin Laden) ಇದರ ನಾಯಕನಾಗಿ ಹೊರಹೊಮ್ಮಿದ. ಈ ಉಗ್ರರು 2001ರ ಸೆಪ್ಟೆಂಬರ್‌ 11 ರಂದು ಅಮೆರಿಕದ ವಿಶ್ವ ವಾಣಿಜ್ಯ ಅವಳಿ ಕಟ್ಟಡದ ಮೇಲೆ ದಾಳಿ ಮಾಡಿದರು.

world trade center

ತನ್ನ ಮೇಲೆ ದಾಳಿ ಮಾಡಿದ್ದಕ್ಕೆ ಕೆರಳಿದ ಅಮೆರಿಕ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಮೇಲೆ ಯುದ್ಧ ಸಾರಿತು. ಯುದ್ಧ, ಅಭಿವೃದ್ಧಿ ಹೆಸರಿನಲ್ಲಿ ಅಮೆರಿಕ ಬಿಲಿಯನ್‌ಗಟ್ಟಲೇ ಡಾಲರ್‌ ಸುರಿದು ಕೊನೆಗೆ ಅಫ್ಘಾನಿಸ್ತಾನದಲ್ಲಿ ಒಂದು ಸರ್ಕಾರ ರಚಿಸುವಲ್ಲೂ ಯಶಸ್ವಿಯಾಯಿತು. ಆದರೆ ಅಫ್ಘಾನ್‌ ಜನರಿಗೆ ಸರ್ಕಾರ ಮತ್ತು ಅಮೆರಿಕದ ಮೇಲೆ ವಿಶ್ವಾಸ ಇರಲಿಲ್ಲ. ಮತ್ತೊಂದು ಕಡೆ ತಾಲಿಬಾನ್‌ ಉಗ್ರರು ಅಮೆರಿಕ ಸೈನಿಕರಿಗೆ ಭಾರೀ ಪ್ರತಿರೋಧ ಒಡ್ಡುತ್ತಿದ್ದರು. ತಾಲಿಬಾನ್‌ ಉಗ್ರರನ್ನು ನಿಭಾಯಿಸಲು ಸಾಧ್ಯವಾಗದೇ ಕೊನೆಗೆ 2021ರಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯಿತು. ಇದನ್ನೂ ಓದಿ: ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

ತಾಲಿಬಾನ್‌ ಸರ್ಕಾರಕ್ಕೆ ಪಾಕ್‌ ಬೆಂಬಲ
ಅಮೆರಿಕ ಸೇನೆ ಅಫ್ಘಾನಿಸ್ತಾದಿಂದ ಮರಳಿದ್ದನ್ನು ಪಾಕಿಸ್ತಾನ ಸ್ವಾಗತಿಸಿತ್ತು. ಅಂದು ಅಧಿಕಾರದಲ್ಲಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಆಮದು ಮಾಡಿದ ಸರ್ಕಾರ ದೇಶವನ್ನು ಆಳುವುದು ಸರಿಯಲ್ಲ ಎಂದು ಹೇಳಿ ತಾಲಿಬಾನ್‌ ಸರ್ಕಾರವನ್ನು ಶ್ಲಾಘಿಸಿದ್ದರು. ಪಾಕ್‌ ಜನತೆ ತಾಲಿಬಾನ್‌ ಸರ್ಕಾರವನ್ನು ಮೆಚ್ಚಿಕೊಂಡಿದ್ದರು. ಆದರೆ ನಾವು ಹೊಗಳಿದ ಸರ್ಕಾರವೇ ನಮಗೆ ತಿರುಗುಬಾಣವಾಗುತ್ತದೆ ಎಂದು ಪಾಕ್‌ ಅಂದುಕೊಂಡಿರಲಿಲ್ಲ. ಯಾವಾಗ ಅಫ್ಘಾನಿಸ್ತಾನವನ್ನು ಅಮೆರಿಕ ತೊರೆಯಿತೋ ಅಂದಿನಿಂದ ನಾವೇ ಬೆಂಬಲ ನೀಡಿದ್ದ ಉಗ್ರರ ಬಣ್ಣ ಏನು ಎನ್ನುವುದು ಪಾಕಿಸ್ತಾನಕ್ಕೆ ತಿಳಿಯತೊಡಗಿತು.

Taliban Pakistan Why are Afghanistan and Pakistan enemies 7

ಪಾಕ್‌ ಮೇಲೆ ಸಿಟ್ಯಾಕೆ?
1. ಡುರಾಂಡ್‌ ಗಡಿ ರೇಖೆ:
ಫ್ಘಾನಿಸ್ತಾನಕ್ಕೆ ಪಾಕಿಸ್ತಾನದ ಮೇಲೆ ವಿರೋಧ ಕೆಲ ವರ್ಷಗಳಿಂದ ಆರಂಭವಾಗಿಲ್ಲ. ವಿರೋಧಕ್ಕೆ ಮುಖ್ಯ ಕಾರಣ ಡುರಾಂಡ್‌ ಗಡಿ ರೇಖೆ. ಪಾಕಿಸ್ತಾನ ಮತ್ತು ಅಫ್ಘಾನ್‌ ಮಧ್ಯೆ ಈ 2,670 ಕಿ.ಮೀ ಉದ್ದದ ಗಡಿ ರೇಖೆ (Durand Line) ಹಾದು ಹೋಗಿದೆ. ಅಫ್ಘಾನಿಸ್ತಾನದಲ್ಲಿ ಪಶ್ತೂನ್‌ ಬುಡಕಟ್ಟು ಜನಸಂಖ್ಯೆಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತ ಪಾಕಿಸ್ತಾನದಲ್ಲೂ ಪಶ್ತೂನ್‌ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಕೆಲ ಸಂಬಂಧಿಕರು ಅಫ್ಘಾನಿಸ್ತಾನ ಭಾಗದಲ್ಲಿದ್ದರೆ ಇನ್ನು ಕೆಲವರು ಪಾಕಿಸ್ತಾನದಲ್ಲಿದ್ದಾರೆ. ಈ ಕಾರಣಕ್ಕೆ ಅಫ್ಘಾನಿಸ್ತಾನ ಇಲ್ಲಿಯವರೆಗೆ ಅದು ಗಡಿ ರೇಖೆ ಎಂಬುದನ್ನು ಒಪ್ಪಿಕೊಂಡಿಲ್ಲ.

2. ಅಮೆರಿಕಕ್ಕೆ ಪಾಕ್‌ ಸಹಾಯ
ಅಫ್ಘಾನಿಸ್ತಾನ ಭೂಮಿಯಿಂದ ಅವೃತವಾದ ದೇಶ. ಈ ಕಾರಣಕ್ಕೆ ಅಮೆರಿಕ ಪಾಕಿಸ್ತಾನದ ಮೂಲಕ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿತ್ತು. ಅಮೆರಿಕದ ಹಡಗುಗಳು ಕರಾಚಿ ಬಂದರಿಗೆ ಬಂದು ಅಲ್ಲಿಂದ ನೆಲ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಿಗೆ ಸಾಗಿಸುತ್ತಿತ್ತು. ತನ್ನ ವಿರುದ್ಧದ ಯುದ್ಧಕ್ಕೆ ಪಾಕಿಸ್ತಾನ ಅಮೆರಿಕಕ್ಕೆ ಸಹಾಯ ನೀಡಿದ್ದು ತಾಲಿಬಾನ್‌ ಸಿಟ್ಟಿಗೆ ಮತ್ತೊಂದು ಕಾರಣ.

Taliban Pakistan Why are Afghanistan and Pakistan enemies 5

3. ಗಡಿ ಬೇಲಿ:
ತಾಲಿಬಾನ್‌ನಲ್ಲಿ ಉಗ್ರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇಶವನ್ನು ರಕ್ಷಿಸಿಕೊಳ್ಳಲು ಗಡಿಯಲ್ಲಿ ಬೇಲಿ ಹಾಕಲು ಪಾಕಿಸ್ತಾನ ಮುಂದಾಗಿತ್ತು. ಗಡಿ ಬೇಲಿಗೆ ಅಫ್ಘಾನಿಸ್ತಾನ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿತ್ತು. ಆದರೂ ಅಮೆರಿಕದ ಬೆಂಬಲದಿಂದ ಬೇಲಿ ಹಾಕುವ ಕೆಲಸವನ್ನು ಆರಂಭಿಸಿತ್ತು. 2600 ಕಿ.ಮೀ ಉದ್ದದ ಗಡಿಯಲ್ಲಿ 94% ಬೇಲಿ ಹಾಕುವ ಕೆಲಸ ಪೂರ್ಣಗೊಂಡಿದೆ. ಬೇಲಿ ಹಾಕುವ ಮೊದಲು ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಜನರು ಎರಡು ಗಡಿಯನ್ನು ದಾಟುತ್ತಿದ್ದರು.

FATA ಪ್ರಾಂತ್ಯದ ಬಿಕ್ಕಟ್ಟು
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಉಗ್ರರ ದಾಳಿ ಹೆಚ್ಚಾಗಲು ಕಾರಣ ಫಾಟಾ ಪ್ರ್ಯಾಂತ್ಯದ ಬಿಕ್ಕಟ್ಟು. 1947ರಲ್ಲಿ ಪಾಕಿಸ್ತಾನ ರಚನೆಯಾದ ಬಳಿಕ 2017ರವರೆಗೆ ಈ Federally Administered Tribal Areas ಎಂದು ಕರೆಸಿಕೊಳ್ಳುವ ಪ್ರದೇಶದ ನಿಯಂತ್ರಣ ಪಾಕ್‌ ಬಳಿ ಇರಲಿಲ್ಲ. 2018ರಲ್ಲಿ ಪಾಕ್‌ ಸಂಸತ್ತು ಮಸೂದೆ ಪಾಸ್‌ ಮಾಡಿ ಅದು ತನ್ನ ಭಾಗ ಎಂದು ಘೋಷಿಸಿತು. ಈ ಪ್ರದೇಶವನ್ನು ಖೈಬರ್ ಪಖ್ತುಂಕ್ವಾದ ಜೊತೆ ವಿಲೀನಗೊಳಿಸಿತು. ಪಾಕಿಸ್ತಾನದ ಈ ನಿರ್ಧಾರ ತಾಲಿಬಾನ್‌ ಉಗ್ರರನ್ನು ಕೆರಳಿಸಿತು. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

Taliban Pakistan Why are Afghanistan and Pakistan enemies 2

ಪಾಕಿಸ್ತಾನದಲ್ಲಿರುವ ತಹ್ರಿಕ್‌ ಇ ತಾಲಿಬಾನ್‌ ಮತ್ತು ಅಫ್ಘಾನಿಸ್ತಾನ ತಾಲಿಬಾನ್‌ ಬೇರೆ ಬೇರೆಯಾದರೂ ಎರಡೂ ಸಂಘಟನೆಗಳು ಪರಸ್ಪರ ಸಹಕಾರ ನೀಡುತ್ತಿದ್ದವು. ಅಮೆರಿಕದ ದಾಳಿ ಜಾಸ್ತಿಯಾದಾಗ ಪಾಕ್‌ನಲ್ಲಿರುವ ತೆಹ್ರಿಕ್‌-ಇ-ತಾಲಿಬಾನ್‌ ಸಂಘಟನೆ ತಾಲಿಬಾನ್‌ ಉಗ್ರರಿಗೆ ರಕ್ಷಣೆ ನೀಡುತ್ತಿತ್ತು. ಗಡಿ ಕಿತ್ತಾಟ ನಡೆಯುವ ಮೊದಲು ಅ‍ಫ್ಘಾನಿಸ್ತಾನದ ಸಾಕಷ್ಟು ಮಂದಿ ಪಾಕಿಸ್ತಾನದ ಕರಾಚಿ, ಪೇಶಾವರದಲ್ಲಿ ರಿಯಲ್‌ ಎಸ್ಟೇಟ್‌, ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದ್ದರು. ಎರಡು ಸಂಘಟನೆಗಳು ಬೇರೆ ಬೇರೆಯಾಗಿದ್ದರೂ ಎರಡರ ಶತ್ರು ಈಗ ಪಾಕಿಸ್ತಾನ. ಪಾಕಿಸ್ತಾನ ಫಾಟಾ ಕೈವಶ ಮಾಡಿದ್ದನ್ನು ಅರಗಿಸಿಕೊಳ್ಳದ ಉಗ್ರರು ಮತ್ತಷ್ಟು ಕೆರಳಿ ಪಾಕ್‌ನ ಹಲವು ಕಡೆ ಬಾಂಬ್‌ ದಾಳಿ ನಡೆಸುತ್ತಿದ್ದಾರೆ.

ಉಗ್ರರ ಉಪಟಳ ಹೆಚ್ಚಾಗುತ್ತಿದ್ದಂತೆ ಪಾಕ್‌ ಸರ್ಕಾರ ಸಂಧಾನಕ್ಕೆ ಮುಂದಾಗಿತ್ತು. ಈ ಮಾತುಕತೆಯ ವೇಳೆ ಉಗ್ರ ಸಂಘಟನೆಗಳು ಎರಡು ಮಹತ್ವದ ಬೇಡಿಕೆ ಇಟ್ಟಿತ್ತು. ಫಾಟಾ ಪ್ರಾಂತ್ಯದಿಂದ ಪಾಕ್‌ ಸೈನಿಕರು ಹಿಂದಕ್ಕೆ ಹೋಗಬೇಕು ಮತ್ತು ಫಾಟಾವನ್ನು ಅಫ್ಘಾನಿಸ್ತಾನದ ಜೊತೆ ವಿಲೀನ ಮಾಡಬೇಕು ಎಂದು ಹೇಳಿತ್ತು. ಈ ಎರಡು ಬೇಡಿಕೆಯನ್ನು ಪಾಕ್‌ ಒಪ್ಪಲಿಲ್ಲ. ಒಂದು ವೇಳೆ ಉಗ್ರರಿಗೆ ಶರಣಾಗಿ ಒಪ್ಪಿದರೆ ಸರ್ಕಾರ ಪತನವಾಗುತ್ತದೆ ಎನ್ನುವುದು ಪಾಕ್‌ ರಾಜಕಾರಣಿಗಳಿಗೆ ಗೊತ್ತಿತ್ತು. ತಮ್ಮ ಬೇಡಿಕೆಯನ್ನು ಒಪ್ಪದ್ದಕ್ಕೆ ಪಾಕ್‌ನಲ್ಲಿ ಉಗ್ರರ ದಾಳಿ ಈಗ ಮತ್ತಷ್ಟು ಹೆಚ್ಚಾಗುತ್ತಿದೆ.

ದಿವಾಳಿಯತ್ತ ಪಾಕ್‌
ಭಾರೀ ಮಳೆಯಿಂದ ಉಂಟಾದ ನೆರೆಯಿಂದ ಪಾಕ್‌ ಈಗಾಗಲೇ ತತ್ತರಿಸಿ ಹೋಗಿದೆ. ಸೇನೆ ಹಿಡಿತದಲ್ಲಿರುವ ಕಾರಣ ಸರ್ಕಾರ ಆಗಾಗ ಅಸ್ಥಿರಗೊಳ್ಳುತ್ತಿದ್ದು ಇಲ್ಲಿಯವರೆಗೆ ಯಾವುದೇ ಸರ್ಕಾರ ಪೂರ್ಣಾವಧಿ ಮಾಡಲೇ ಇಲ್ಲ. ಪರಿಣಾಮ ಯಾವುದೇ ವಿದೇಶಿ ಹೂಡಿಕೆ ಇಲ್ಲ. ಇದರಿಂದಾಗಿ ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಪರಿಣಾಮ ಹಣದುಬ್ಬರ ಏರಿದ್ದು ಬೆಲೆಗಳು ಏರಿಕೆಯಾಗಿದೆ. ಉದ್ಯೋಗ ಸಿಗದ ಕಾರಣ ವಿದ್ಯಾವಂತರು ದೇಶವನ್ನು ತೊರೆಯುತ್ತಿದ್ದಾರೆ. ಈ ಮಧ್ಯೆ ಉಗ್ರರ ಕಾಟ. ಎಲ್ಲದರ ಪರಿಣಾಮ ಪಾಕಿಸ್ತಾನ ಈಗ ದಿವಾಳಿಯಾಗುವ ಹಂತಕ್ಕೆ ತಲುಪಿದೆ.

– ಅಶ್ವಥ್‌ ಸಂಪಾಜೆ

 

Web Stories

Share This Article