ಹತಾಶೆಯಿಂದ ಹೆಚ್‌ಡಿಕೆ ಮಾತು: ಸಚಿವ ತಂಗಡಗಿ

Public TV
2 Min Read
shivaraj tangadagi

ಬೆಂಗಳೂರು: ವಿಧಾನಸಭೆ ಫಲಿತಾಂಶಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಇಟ್ಟುಕೊಂಡಿದ್ದ ಆಸೆಗೆ ಫಲಿತಾಂಶದಿಂದ ತಣ್ಣೀರು ಎರೆಚಿದಂತಾಗಿದೆ. ಇದರಿಂದ ಹತಾಶೆಗೊಂಡು ಮಾತನಾಡುತ್ತಿದ್ದಾರೆ ಎಂದು ಸಚಿವ‌ ಶಿವರಾಜ್ ತಂಗಡಗಿ (Shivaraj Tangadagi) ಲೇವಡಿ ಮಾಡಿದರು.

ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ಜನ ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಅವಕಾಶ ನೀಡಿದ್ದಾರೆ. ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಇದನ್ನು ಸಹಿಸಲು ಆಗದ ವಿಪಕ್ಷದ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಪರಿಣಾಮ‌ ಲೋಕಸಭಾ ಚುನಾವಣೆಯಲ್ಲೂ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ಅನ್ನಭಾಗ್ಯ ಹಣ ವರ್ಗಾವಣೆ- ಕೆ.ಎಚ್ ಮುನಿಯಪ್ಪ

shivaraj tangadagi 1

ಬಿಜೆಪಿಗರು ತಮ್ಮ ಆಡಳಿತಾವಧಿಯಲ್ಲಿ ದಲಿತರ ಬಗ್ಗೆ ಯಾವುದೇ ಯೋಜನೆ ರೂಪಿಸಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿಗೆ ದಲಿತರ ಬಗ್ಗೆ ಕಾಳಜಿ ಹೆಚ್ಚಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಹಣವನ್ನು ಎಲ್ಲೆಲ್ಲಿ ಬಳಕೆ ಮಾಡಬೇಕು ಎಂಬ ಅರಿವು ನಮ್ಮ ಸರ್ಕಾರಕ್ಕೆ ಇದೆ. ಈ ಎರಡು ಸಮುದಾಯಗಳ ಹಣ ಸದ್ಭಳಕೆ ಬಗ್ಗೆ ಸೂಕ್ತ ‌ಕಾನೂನನ್ನು ತಂದಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಈ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ಯೋಗ್ಯತೆ ಇಲ್ಲ ಎಂದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ ಎಂದು ಭಾವಿಸಿದ್ದೆವು. ಆದರೆ ರಾಜ್ಯಕ್ಕೆ ಬೊಮ್ಮಾಯಿ ಅವರ ಕೊಡುಗೆ ಶೂನ್ಯ.‌ ಪ್ರಮುಖ ವಿಪಕ್ಷವಾಗಿ‌ ಬಿಜೆಪಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕೇವಲ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

HDK 2 1

ಪಕ್ಷ ಸಂಘಟನೆ ಬಗ್ಗೆ ಚರ್ಚೆ:
ಏಳೆಂಟು ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಜವಾಬ್ದಾರಿ ಬಗ್ಗೆ ದೆಹಲಿ ಸಭೆಯಲ್ಲಿ ಚರ್ಚೆ ನಡೆದಿದೆ. ರಾಜಕೀಯ ಬದಲಾವಣೆಗಳು ಕರ್ನಾಟಕದಿಂದಲೇ ಆರಂಭವಾಗುವುದು. ಹೀಗಾಗಿ ಲೋಕಸಭಾ ಚುನಾವಣೆಗೆ ರಾಜ್ಯದಿಂದಲೇ ಅತಿ‌ ಹೆಚ್ಚು ಸೀಟು ಗೆಲ್ಲಬೇಕು ಎನ್ನುವ ಬಗ್ಗೆ ವರಿಷ್ಠರು ಸೂಚನೆ ನೀಡಿದ್ದು, ಆ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಲಿದ್ದೇವೆ ಎಂದು ಸಚಿವರು ತಿಳಿಸಿದರು.‌ ಇದನ್ನೂ ಓದಿ: ಪ್ರತಿಭಟನಾ ಸಭೆಯ ವೇದಿಕೆ ಹತ್ತಲು ಯತ್ನಿಸಿದ ಸೌಜನ್ಯ ತಾಯಿಯನ್ನು ತಡೆದ ಪೊಲೀಸರು

ಪಕ್ಷದಲ್ಲಿ ಯಾರಿಗೂ ಅಸಮಾಧಾನ ಇಲ್ಲ.‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲವನ್ನೂ ನಿಭಾಯಿಸುತ್ತಾರೆ. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ನನಗೆ ಬಹಳ ಆತ್ಮೀಯರು. ಅವರ ಬಗ್ಗೆ ಅಪಾರ ಗೌರವವಿದೆ. ರಾಯರೆಡ್ಡಿ ಅವರು ಹೆಚ್ಚು ಬಾರಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದವರು.‌ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದರು.

ಅನಾಥ ಮಕ್ಕಳನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಬಗ್ಗೆ ಆಯೋಗ ವರದಿ ಕೊಟ್ಟಿದ್ದು,‌ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ‌‌ ಸಚಿವರು ಉತ್ತರಿಸಿದರು.

Web Stories

Share This Article