ಹಿಮಾಚಲಪ್ರದೇಶದ (Himachalpradesh) ಕುಲುವಿನಲ್ಲಿ ಸೋಮವಾರ ಮೇಘಸ್ಫೋಟ (CloudBurst) ಸಂಭವಿಸಿ ಭಾರೀ ಹಾನಿಯಾಗಿದೆ. ಒಮ್ಮಿಂದೊಮ್ಮೆಲೆ ಬಂದ ರಭಸವಾದ ಭಾರೀ ನೀರಿನಿಂದ ಜನ ಮನೆ-ಮಠ ಕಳೆದಕೊಂಡು ದಿಕ್ಕಾಪಾಲಾಗಿದ್ದಾರೆ. ಇದರ ವೀಡಿಯೋಗಳನ್ನು ನೋಡಿದರೆ ನಿಜಕ್ಕೂ ಮೈಜುಂ ಅನ್ನುತ್ತದೆ. ಕಲ್ಲು, ಮಣ್ಣು ಮಿಶ್ರಿತ ನೀರು ಅತ್ಯಂತ ರಭಸದಿಂದ ಬರುವಾಗ ಎದುರಿಗಿದ್ದ ಗಿಡ-ಮರಗಳು-ಮನೆಗಳು ಹೇಳಹೆಸರಿಲ್ಲದಂತೆ ಕೊಚ್ಚಿ ಹೋಗುವುದನ್ನು ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಹಾಗಾದರೆ ಮೇಘಸ್ಫೋಟ ಅಂದರೆ ಏನು? ಯಾವ ಪ್ರದೇಶದಲ್ಲಿ ಇದು ಬೀಳುತ್ತದೆ? ಎಷ್ಟು ಮಿ.ಮಿ ಮಳೆ ಬಿದ್ರೆ ಮೇಘಸ್ಫೋಟ ಎಂದು ಕರೆಯಲಾಗುತ್ತದೆ ಎಂಬುದರ ಡೀಟೈಲ್ ವರದಿ ಇಲ್ಲಿದೆ.
ಮೇಘಸ್ಫೋಟ ಅಂದರೆ ಏನು?:
ಅತಿ ದೊಡ್ಡ ಗಾತ್ರದ ನೀರಿನ ಮೋಡಗಳು ವಾತಾವರಣದಲ್ಲಿ ಶೇಖರಣೆಯಾಗಿ ಅದು ಒಮ್ಮಿಂದೊಮ್ಮೆಲೆ ಭೂಮಿಯ ಮೇಲೆ ಸುರಿಯುತ್ತದೆ. ಒಂದು ಸೀಮಿತ ಪ್ರದೇಶದಲ್ಲಿ ಸ್ವಲ್ಪ ಕಾಲ ಬೀಳುತ್ತದೆ. ಇದರ ಜೊತೆ ಭಯಂಕರ ಗುಡುಗು, ಸಿಡಿಲು ಇರುವುದಲ್ಲದೆ ಆಲಿಕಲ್ಲು ಸಹ ಬೀಳುವುದು. ಇಂತಹ ಧಿಡೀರ್ ಮಳೆಯಿಂದ ಪ್ರವಾಹ ಹಾಗೂ ಅನೇಕ ರೀತಿಯ ನಾಶ ಉಂಟಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಮಳೆಯಾಗುವುದೇ ಕೆಲವೇ ನಿಮಿಷಗಳು ಆದರೂ ಪರಿಣಾಮ ಮಾತ್ರ ರಣಭೀಕರವಾಗಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಅನಿರೀಕ್ಷಿತವಾಗಿ ಬರುವ ಹಾಗೂ ಸ್ವಲ್ಪವೇ ಕಾಲ ಇರುವ, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ಮಳೆಗೆ ಮೇಘಸ್ಫೋಟ ಎಂದು ಕರೆಯಲಾಗುತ್ತಿದೆ.
ಮಳೆ, ಮೇಘಸ್ಫೋಟ ನಡುವಿನ ವ್ಯತ್ಯಾಸವೇನು?:
ಮೇಘಸ್ಫೋಟ ಹಾಗೂ ಸಾಮಾನ್ಯವಾಗಿ ಬೀಳುವ ಮಳೆಗೂ (Rain) ವ್ಯತ್ಯಾಸವಿದೆ. ಮಳೆಯು ಮೋಡದಿಂದ ಬೀಳುವ ಘನೀಕೃತ ನೀರು ಆಗಿದೆ. ಆದರೆ ಒಂದು ಸೀಮಿತ ಪ್ರದೇಶದಲ್ಲಿ ಸ್ವಲ್ಪ ಕಾಲ ಬಿದ್ದರೂ ಭಾರೀ ಹಾನಿ ಉಂಟುಮಾಡುವುದು ಮೇಘಸ್ಫೋಟ. ಗಂಟೆಗೆ 100 ಮಿ.ಮೀ ಗಿಂತ ಹೆಚ್ಚಿನ ಮಳೆಯನ್ನು ಮೇಘಸ್ಫೋಟ ಎಂದು ವರ್ಗೀಕರಿಸಲಾಗಿದೆ.
ಈ ಮಳೆ ಸುರಿಸುವ ಮೋಡದ ಎತ್ತರ ಭೂಮಿಯಿಂದ 14 ಕಿ.ಲೋ ಮೀಟರ್‍ವರೆಗೂ ಇರುತ್ತದೆ. ಕೆಲವೊಮ್ಮೆ ಕೆಲವೇ ನಿಮಿಷಗಳಲ್ಲಿ 20 ಮಿ.ಮೀ ಗಿಂತ ಹೆಚ್ಚಿನ ಮಳೆ ಸುರಿಯುತ್ತದೆ. ಇದರಿಂದಾಗಿ ನಿಮಿಷಗಳಲ್ಲೇ ಭಾರೀ ಪ್ರವಾಹ ಉಂಟಾಗುತ್ತದೆ. ಭಾರತದಲ್ಲಿ ಇಂತಹ ಮಳೆಗಳು ಸಾಮಾನ್ಯವಾಗಿ ಬೆಟ್ಟದ ಮೇಲೆ ಅಥವಾ ಪರ್ವತದ ಮೇಲೆ ಬೀಳುತ್ತವೆ.
ಪರ್ವತಗಳಲ್ಲೇ ಯಾಕೆ ಉಂಟಾಗುತ್ತದೆ?:
ಗುಡ್ಡಗಾಡು ಪ್ರದೇಶಗಳು ಮೇಘ ಸ್ಫೋಟಕ್ಕೆ ಜಾಸ್ತಿ ಒಳಗಾಗುತ್ತದೆ. ಯಾಕೆಂದರೆ ಕಡಿದಾದ ಬೆಟ್ಟಗಳಂತಹ ಸ್ಥಳದ ಪರಿಸ್ಥಿತಿಗಳು ಈ ಮೋಡಗಳ ರಚನೆಗೆ ಅನುಕೂಲಕರವಾಗಿವೆ. ಕಡಿದಾದ ಇಳಿಜಾರುಗಳಲ್ಲಿ ನೀರು ಹರಿಯುವುದರಿಂದ ಅದು ಹೆಚ್ಚಿನ ವೇಗದಲ್ಲಿದ್ದು, ಎದುರು ಸಿಕ್ಕ ಬಂಡೆಗಳು ಮತ್ತು ಬೇರುಸಹಿತ ಮರಗಳು ಹೀಗೆ ದಾರಿಯಲ್ಲಿ ಬರುವ ಯಾವುದೇ ವಸ್ತುಗಳಾದರೂ ಸರಿ ಕೊಚ್ಚಿಕೊಂಡು ಹೋಗುತ್ತದೆ.
ಪರಿಣಾಮಗಳು ಏನು?:
ಮೇಘಸ್ಫೋಟಗಳು ಆಗವುದು ತುಂಬಾ ವಿರಳ. ಆದರೆ ಇದು ಸಂಭವಿಸಿದರೆ ಮಾತ್ರ ಭಾರೀ ಹಾನಿ ಕಟ್ಟಿಟ್ಟ ಬುತ್ತಿ. ಹಠಾತ್ ಪ್ರವಾಹ, ಭೂಕುಸಿತ, ಮಣ್ಣಿನ ಹರಿವು ಮತ್ತು ಭೂಮಿ ಇಳುವರಿ ಮುಂತಾದ ಪ್ರದೇಶದಲ್ಲಿ ಮೇಘಸ್ಫೋಟದ ಪರಿಣಾಮಗಳಾಗಿವೆ. ಪ್ರವಾಹದ ಪರಿಣಾಮವಾಗಿ ಮನೆಗಳಲ್ಲಿ ನೀರು ತುಂಬಿ, ಹಲವಾರು ಸಾವುಗಳಿಗೆ ಕಾರಣವಾಗುತ್ತದೆ. ತಾತ್ಕಾಲಿಕ ನಷ್ಟ ಮತ್ತು ಜಲಾಶಯದ ಶೇಖರಣೆಯಿಂದಾಗಿ ನದಿಗಳ ಮಾರ್ಗವನ್ನು ನಿರ್ಬಂಧಿಸುವುದು, ಕುಸಿತಕ್ಕೆ ಕಾರಣವಾಗುತ್ತದೆ. ಇವುಗಳು ಭಾರೀ ಮಳೆಯ ಪರಿಣಾಮವಾಗಿದೆ. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಇದು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತದೆ.
ಅತಿ ದೊಡ್ಡ ಮೇಘಸ್ಫೋಟ ಸಂಭವಿಸಿದ್ದು ಎಲ್ಲಿ? ಯಾವಾಗ?:
2005 ರ ಜುಲೈ 26 ರಂದು ಮುಂಬೈನಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಈ ವೇಳೆ ಸರಿಸುಮಾರು 950 ಮಿಲಿಮೀಟರ್ (37 ಇಂಚು) ಮಳೆಯನ್ನು ಉಂಟುಮಾಡಿತು. ಅಂದು 8 ರಿಂದ 10 ಗಂಟೆಗಳ ಕಾಲ ಮಳೆ ಸುರಿದು, ಭಾರತದ ಅತಿದೊಡ್ಡ ನಗರ ಮತ್ತು ಆರ್ಥಿಕ ರಾಜಧಾನಿಯಾದ ಮುಂಬೈ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿತು. ಇದರಲ್ಲಿ ಸುಮಾರು 1,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಮುಂಬೈನ ಹಲವೆಡೆ ಚರಂಡಿಗಳು ಮುಚ್ಚಿಹೋಗಿದ್ದರಿಂದ ಅರ್ಧದಷ್ಟು ಪ್ರವಾಹ ಉಂಟಾಗಿತ್ತು.
Web Stories