ಯಮುನಾ ನದಿಯ ತಗ್ಗು ಪ್ರದೇಶದ ನಿವಾಸಿಗಳ ಸ್ಥಳಾಂತರಕ್ಕೆ ಕೇಜ್ರಿವಾಲ್ ಸೂಚನೆ

Public TV
1 Min Read
arvind kejriwal

ನವದೆಹಲಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ಯಮುನಾ ನದಿ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸೂಚಿಸಿದ್ದಾರೆ.

ಈ ಸಂಬಂಧ ತುರ್ತು ಸಭೆ ಕರೆದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ, ಅಪಾಯದ ಮಟ್ಟ ಮೀರಿ ಯಮುನಾ ನದಿ (Yamuna River) ಹರಿಯುತ್ತಿದೆ. ಈ ಮೂಲಕ 45 ವರ್ಷದ ದಾಖಲೆಯನ್ನು ಇಂದು ಮುರಿದಿದೆ. ಪರಿಸ್ಥಿತಿಯನ್ನು ಅರಿತುಕೊಂಡು ಎನ್‍ಡಿಆರ್‍ಎಫ್‍ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಯಮುನಾ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಗಳನ್ನು ಪರಿಹಾರ ಶಿಬಿರಗಳನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಗೆ ಕೇಜ್ರಿವಾಲ್ ಸೂಚನೆ ನೀಡಿದರು. ದೆಹಲಿಯ ಯಮುನಾ ನದಿಯ ನೀರಿನ ಮಟ್ಟ ಬುಧವಾರ 207.71 ಮೀಟರ್ ಗೆ ಏರಿಕೆಯಾಯಿತು. 1978 ರಲ್ಲಿ ನೀರಿನ ಮಟ್ಟ 207.49 ಮೀಟರ್‍ಗೆ ಏರಿತ್ತು.

ನದಿಯ ಸಮೀಪವಿರುವ ಮನೆಗಳು ಮತ್ತು ಮಾರುಕಟ್ಟೆಗಳಿಗೆ ನೀರು ನುಗ್ಗಿದ್ದರಿಂದ ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ನೀರಿನ ಮಟ್ಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯಮುನಾದಲ್ಲಿ ನೀರಿನ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡಲು ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‍ನಿಂದ ಸೀಮಿತ ನೀರನ್ನು ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಿಎಂ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಪ್ರವಾಹದ ಸುದ್ದಿ ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ನಾವು ಒಟ್ಟಾಗಿ ದೆಹಲಿಯ ಜನರನ್ನು ಈ ಪರಿಸ್ಥಿತಿಯಿಂದ ರಕ್ಷಿಸಬೇಕಾಗಿದೆ. ಮುಂಬರುವ ವಾರಗಳಲ್ಲಿ ದೆಹಲಿಯು ಜಿ -20 ಶೃಂಗಸಭೆಯನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article