ಪಿ.ಸಿ ಶೇಖರ್ ನಿರ್ದೇಶನದ ಹತ್ತನೇ ಚಿತ್ರ ಹಾಗೂ ನಕುಲ್ ಗೌಡ (ಪ್ರೀತಿಯ ರಾಯಭಾರಿ ಖ್ಯಾತಿ) ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘BAD’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ (Ganesh) ಫಸ್ಟ್ ಲುಕ್ (First Look) ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಇದು ನಾಯಕ ಪ್ರಧಾನ ಚಿತ್ರವಲ್ಲ. ಏಳು ಮುಖ್ಯಪಾತ್ರಗಳಿವೆ. ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಅರಿಷಡ್ವರ್ಗಗಳಿರುತ್ತದೆ. ಈ ಆರು ಅರಿಷಡ್ವರ್ಗಗಳನ್ನು ಚಿತ್ರದ ಆರು ಪಾತ್ರಗಳು ಪ್ರತಿನಿಧಿಸುತ್ತದೆ. ಆ ಪೈಕಿ ಕ್ರೋಧವನ್ನು ಪ್ರತಿನಿಧಿಸುತ್ತಿರುವ ನಕುಲ್ ಗೌಡ ಅವರ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಸಾಮಾನ್ಯವಾಗಿ ಕ್ರೋಧವನ್ನು ಕಿರಿಚುವುದು, ಅರಚುವುದು ಮುಂತಾದ ವಿಚಿತ್ರ ರೀತಿಗಳಿಂದ ತೋರಿಸುತ್ತಾರೆ. ನಾವು ಮುಖದ ಹಾವಭಾವದಲ್ಲಿ ಕ್ರೋಧವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್
ಇದೊಂದು ವಿಭಿನ್ನ ಕಥೆಯ ಚಿತ್ರ ಎಂದು ತಿಳಿಸಿರುವ ಮುಖ್ಯ ಪಾತ್ರಧಾರಿ ನಕುಲ್, ನನ್ನದು ಈ ಚಿತ್ರದಲ್ಲಿ ಕ್ರೋಧವನ್ನು ಪ್ರತಿನಿಧಿಸುವ ಪಾತ್ರ. ಕ್ರೋಧವನ್ನು ಚಿತ್ರದಲ್ಲಿ ಭೀಕರವಾಗಿ ತೋರಿಸಿಲ್ಲ. ನಿರ್ದೇಶಕ ಪಿ.ಸಿ.ಶೇಖರ್ (PC Shekhar) ಉತ್ತಮವಾದ ಕಥೆ ಮಾಡಿದ್ದಾರೆ. ಚಿತ್ರಕಥೆ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಬಹುತೇಕ ಭಾಗದ ಚಿತ್ರೀಕರಣ ಸೆಟ್ ನಲ್ಲೇ ನಡೆದಿರುವುದು ವಿಶೇಷ ಎನ್ನುತ್ತಾರೆ.
ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ BAD ಚಿತ್ರದಲ್ಲಿ ರೋಷಮಾನ್ ಎಫೆಕ್ಟ್ ಎಂಬ ವಿಶೇಷ ವಿಧಾನವನ್ನು ಬಳಸಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.
ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ (Nakul Gowda), ಮಾನ್ವಿತ ಹರೀಶ್ (Manvita Harish), ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Web Stories