ದೇಶದಲ್ಲಿ ಶಾಂತಿ ಕಾಪಾಡಿ- ಆಸ್ಪತ್ರೆಯಿಂದಲೇ ಬೆಂಬಲಿಗರಿಗೆ ಚಂದ್ರಶೇಖರ್ ಆಜಾದ್ ಸಂದೇಶ

Public TV
1 Min Read
CHANDRASHEKHAR AZAD

ಲಕ್ನೋ: ಗುಂಡಿನ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ (Bhim Army chief Chandra Shekhar Aazad) ಇದೀಗ ಆಸ್ಪತ್ರೆಯಿಂದಲೇ ಸಂದೇಶವೊಂದನ್ನು ರವಾನಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಜಾದ್ ಮಾಧ್ಯಮವೊಂದರ ಜೊತೆ ಮಾತನಾಡಿ, ಇಂತಹ ಹಠಾತ್ ದಾಳಿಯನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಸ್ನೇಹಿತರು, ಬೆಂಬಲಿಗರು ಮತ್ತು ದೇಶಾದ್ಯಂತ ಕಾರ್ಯಕರ್ತರಲ್ಲಿ ಶಾಂತಿ ಕಾಪಾಡುವಂತೆ ನಾನು ಮನವಿ ಮಾಡಲು ಬಯಸುತ್ತೇನೆ. ನಾವು ನಮ್ಮ ಹೋರಾಟವನ್ನು ಸಾಂವಿಧಾನಿಕವಾಗಿ ಮುಂದುವರಿಸುತ್ತೇವೆ. ಕೋಟ್ಯಂತರ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.

ನಡೆದಿದ್ದೇನು..?: ಚಂದ್ರಶೇಖರ್ ಆಜಾದ್ ಅವರು ಬುಧವಾರ ಸಂಜೆ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸಹೋದರ ಹಾಗೂ ಇತರೆ ಮೂವರ ಜೊತೆ ಕಾರಿನಲ್ಲಿ ಹೊರಟಿದ್ದರು. ಅಂತೆಯೇ ಉತ್ತರಪ್ರದೇಶದ ಸಹರನ್‍ಪುರ ಜಿಲ್ಲೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಆಜಾದ್ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗುಲಿದೆ. ಅಲ್ಲದೆ ಗುಂಡುಗಳು ಕಾರಿನ ಸೀಟುಗಳ ಮೇಲೆ ಬಿದ್ದಿವೆ. ದಾಳಿ ನಡೆಸಿದವರು ತಮ್ಮ ಕಾರನ್ನು ಹಿಮ್ಮುಖವಾಗಿ ಚಲಿಸಿಕೊಂಡು ಪರಾರಿಯಾದರು ಎಂದು ಆಜಾದ್ ವಿವರಿಸಿದ್ದಾರೆ.

ಇತ್ತ ಗಾಯಗೊಂಡು ಅಪಾಯದಿಂದ ಪಾರಾಗಿದ್ದ ಆಜಾದ್ ಅವರನ್ನು ಕೂಡಲೇ ಸಹರನ್‍ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು ತನಿಖೆಯೂ ಚುರುಕುಗೊಂಡಿದೆ. ನಾಲ್ಕರಿಂದ ಐದು ಮಂದಿ ದಾಳಿ ವೇಳೆ ಇದ್ದರು ಎನ್ನುವ ಮಾಹಿತಿ ಇದ್ದು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಎಸ್ಪಿ ವಿಪಿನ್ ತಾಡಾ ಹಾಗೂ ಎಸ್ಪಿ ಅಭಿಮನ್ಯು ಮಂಗಲಿಕ್ ತಿಳಿಸಿದ್ದರು.

ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಧಾರೆ. ದಾಳಿಗೆ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ. ದಾಳಿ ಮಾಡಿದವರು ಯಾರು ಎನ್ನುವ ಕುರಿತು ತನಿಖೆ ನಡೆಯುತ್ತಿದೆ.

Web Stories

Share This Article