ಕಿತ್ತು ತಿನ್ನುವ ಬಡತನ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಯುವಕ ಈಗ ಟೀಂ ಇಂಡಿಯಾ ಆಟಗಾರ

Public TV
3 Min Read
Mukesh Kumar 1

ಮುಂಬೈ: ಕಿತ್ತು ತಿನ್ನುವ ಬಡತನ, ಹಳ್ಳಿಯಲ್ಲೇ ಜೀವನ, ಅಪೌಷ್ಟಿಕತೆಯಿಂದ ಬಳಲುತ್ತಾ ಶಕ್ತಿ ಕಳೆದುಕೊಂಡಿದ್ದ ಬಿಹಾರ ಮೂಲದ ಯುವಕ ಮುಕೇಶ್‌ಕುಮಾರ್‌ (Mukesh Kumar) ಈಗ ಟೀಂ ಇಂಡಿಯಾ‌ (Team India) ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಹೌದು. ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಕುಗ್ರಾಮದವರಾದ ಮುಖೇಶ್‌ ಕುಮಾರ್‌ ಹಳ್ಳಿಯಲ್ಲಿ ಹುಟ್ಟಿ-ಬೆಳೆದು ಬಡತನದಲ್ಲೇ ಜೀವನ ಸಾಗಿಸುತ್ತಿದ್ದರು. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಹಲವು ವರ್ಷಗಳ ಕನಸನ್ನ ನನಸು ಮಾಡಿಕೊಂಡಿದ್ದಾರೆ.

ಮುಖೇಶ್ ಕುಮಾರ್ ಅವರ ತಂದೆ ಕಾಶಿನಾಥ್ ಸಿಂಗ್ ಟ್ಯಾಕ್ಸಿ ಚಾಲಕರಾಗಿದ್ದರು. ಕುಟುಂಬದ ನಿರ್ವಹಣೆಗೆ ಸಾಕಷ್ಟು ಕಷ್ಟಪಟ್ಟಿದ್ದರು. ಮುಕೇಶ್‌ ಕುಮಾರ್‌ ಕ್ರಿಕೆಟ್‌ ಆಡುವುದು ಆರಂಭದಲ್ಲಿ ಅವರ ತಂದೆಗೆ ಇಷ್ಟವಿರಲಿಲ್ಲ. 2012ರಲ್ಲಿ ಕೋಲ್ಕತ್ತಾಗೆ ಬಂದ ಮುಖೇಶ್‌ ಕುಮಾರ್‌, ರಾತ್ರಿ ವೇಳೆ ಈಡನ್ ಗಾರ್ಡನ್ ಕ್ರಿಕೆಟ್ ಅಂಗಳದ ಸಮೀಪದ ಛತ್ರಗಳಲ್ಲೇ ಮಲಗುತ್ತಿದ್ದರು. ಆದ್ರೆ ಮೆದುಳು ರಕ್ತಸ್ರಾವದಿಂದ ಬಳಲುತ್ತಿದ್ದ ಮುಕೇಶ್‌ ತಂದೆ 2019ರಲ್ಲಿ ನಿಧನರಾಗಿದ್ದರು. ಇದನ್ನೂ ಓದಿ: SAFF Championship 2023: ಚೆಟ್ರಿ ಮ್ಯಾಜಿಕ್‌, ನೇಪಾಳ ವಿರುದ್ಧ 2-0 ಜಯ – ಸೆಮಿಫೈನಲ್‌ಗೆ ಭಾರತ

Mukesh Kumar 2

ಶಕ್ತಿ ಕಳೆದುಕೊಂಡಿದ್ದರು:
ಕಿತ್ತು ತಿನ್ನುವ ಬಡತನದ ನಡುವೆಯೂ ಕ್ರಿಕೆಟ್‌ (Cricket) ಲೋಕದಲ್ಲಿ ಮೈಲುಗಲ್ಲು ಸಾಧಿಸಬೇಕೆಂಬ ಕನಸು ಕಂಡಿದ್ದ ಮುಕೇಶ್‌ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಇದರಿಂದ ದೇಹದಲ್ಲಿ ಶಕ್ತಿ ಕುಂದಿತ್ತು. ಹಾಗಾಗಿ ಹಲವು ಪಂದ್ಯಗಳಲ್ಲಿ ಆಡುವ ಅವಕಾಶವನ್ನೂ ಅವರು ಕಳೆದುಕೊಂಡಿದ್ದರು. 2014ರ ಬೇಸಿಗೆ ಶಿಬಿರದಲ್ಲಿ ಮುಕೇಶ್‌ಗೆ ಅದೃಷ್ಟ ಒಲಿಯಿತು. ಮಾಜಿ ವೇಗಿ ರಾಮದೇವ್ ಬೋಸ್ ಅವರು ಕೊಟ್ಟ ಪ್ರೋತ್ಸಾಹ ಹಾಗೂ ಸತತ ಪರಿಶ್ರಮದ ಫಲದಿಂದ ಈಗ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ಮುಕೇಶ್‌, ನಾನು ಯಾವಾಗಲೂ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ (Test Cricket Match) ಆಡಬೇಕೆಂಬ ಕನಸು ಕಂಡಿದ್ದೆ.‌ ಈಗ ಆ ಸಮಯ ಬಂದಿದೆ. ನನ್ನ ಈ ಏಳಿಗೆಯನ್ನು ನಮ್ಮ ತಂದೆ ನೋಡಿದ್ದರೆ ನಿಜಕ್ಕೂ ಸಂತಸಪಡುತ್ತಿದ್ದರು ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಪೂಜಾರ ಔಟ್‌, ಯಶಸ್ವಿ ಇನ್‌ – ವಿಂಡೀಸ್‌ ಸರಣಿಗೆ ಭಾರತ ಟೆಸ್ಟ್‌, ಏಕದಿನ ತಂಡ ಪ್ರಕಟ

Mukesh Kumar

ದಾದಾಗೆ ಥ್ಯಾಂಕ್ಸ್‌ ಹೇಳಿದ ವೇಗಿ:
ಮುಂದುವರಿದು… ನಮ್ಮ ಪೋಷಕರು, ಸ್ನೇಹಿತರು ಸದಾ ನನಗೆ ಬೆಂಬಲ ನೀಡುತ್ತಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯ “ವಿಷನ್ 2020″ರ ಮೂಲಕ ಆಗಿನ ಕಾರ್ಯದರ್ಶಿ ಸೌರವ್ ಗಂಗೂಲಿ, ಜೋಗ್ ದೀಪ್ ( ಮುಖರ್ಜಿ) ಹಾಗೂ ನನ್ನ ಗುರುಗಳಾದ ರಾಮದೇವ್ ಬೋಸ್ ಅವರು ರೆಡ್ ಬಾಲ್ (ಟೆಸ್ಟ್) ಕ್ರಿಕೆಟ್‌ನಲ್ಲಿ ನನಗೆ ಸದಾ ಸಲಹೆ ನೀಡಿ ನೆರವು ನೀಡುತ್ತಿದ್ದರು. ಅವರು ಸಹಾಯವಿಲ್ಲದೆ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ನೆನೆದಿದ್ದಾರೆ.

149 ವಿಕೆಟ್‌ ಕಿತ್ತ ಸಾಧನೆ:
ಮುಖೇಶ್ ಈವರೆಗೆ ಆಡಿರುವ 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಂದ 21.55ರ ಸರಾಸರಿಯಲ್ಲಿ 149 ವಿಕೆಟ್ ಪಡೆದಿದ್ದಾರೆ. ಅದರಲ್ಲಿ 6 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 24 ಲಿಸ್ಟ್ ʻAʼ ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದರು. 2018-19ನೇ ಸಾಲಿನಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತು. ಈ ಅವಧಿಯಲ್ಲಿ ಪಶ್ಚಿಮ ಬಂಗಾಳದ ರಣಜಿ ಟೂರ್ನಿಯಲ್ಲಿ 5 ಪಂದ್ಯಗಳಲ್ಲಿ 22 ವಿಕೆಟ್‌ ಪಡೆಯುವ ಮೂಲಕ ಗುರುತಿಸಿಕೊಂಡಿದ್ದ ಮುಖೇಶ್, 2023ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 10 ಪಂದ್ಯಗಳಿಂದ 7 ವಿಕೆಟ್ ಉಡೀಸ್‌ ಮಾಡಿದ್ದಾರೆ.

Share This Article