Odisha Train Tragedy – ವಿಚಾರಣೆ ಎದುರಿಸಿದ್ದ ಎಂಜಿನಿಯರ್ ನಾಪತ್ತೆ ಅನ್ನೋ ವರದಿ ನಿರಾಕರಿಸಿದ ರೈಲ್ವೆ

Public TV
2 Min Read
ODISHA TRAIN ACCIDENT

ನವದೆಹಲಿ: ಒಡಿಶಾ ರೈಲು ದುರಂತಕ್ಕೆ (Odisha Train Tragedy) ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (CBI) ವಿಚಾರಣೆ ಎದುರಿಸಿದ ಬಳಿಕ ಜೂನಿಯರ್ ಎಂಜಿನಿಯರ್ (Junior Engineer) ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ಭಾರತದ ಆಗ್ನೇಯ ರೈಲ್ವೆ ನಿರಾಕರಿಸಿದೆ.

289 ಜನರ ಸಾವಿಗೆ ಕಾರಣವಾದ ಭೀಕರ ರೈಲ್ವೆ ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಸೊರೋ ಸೆಕ್ಷನ್ ಆಫೀಸರ್ ಅಮೀರ್ ಖಾನ್ ಅವರನ್ನು ಈ ಹಿಂದೆ ಸಿಬಿಐ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿತ್ತು. ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಸೋಮವಾರ ಸಿಬಿಐ ಅಧಿಕಾರಿಗಳು ಅಮೀರ್ ಖಾನ್ ಮನೆಗೆ ತೆರಳಿದ್ದರು. ಆದರೆ ಅಲ್ಲಿ ಯಾರೂ ಇರದೆ ಮನೆಗೆ ಬೀಗ ಹಾಕಲಾಗಿತ್ತು.

ODISHA TRAIN

ಅವರು ಸಂಪರ್ಕಕ್ಕೂ ಸಿಗದ ಹಿನ್ನೆಲೆ ಅವರ ಬಾಡಿಗೆ ಮನೆಯನ್ನು ಸೀಲ್ ಮಾಡಿ, ಮನೆಯ ಮೇಲೆ ನಿಗಾ ಇಡಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಮೀರ್ ಖಾನ್ ತಮ್ಮ ಕುಟುಂಬದೊಂದಿಗೆ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆದರೆ ಈ ವರದಿಯನ್ನು ಆಗ್ನೇಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಮಾಹಿತಿ ತಪ್ಪಾಗಿದೆ. ಸಿಬ್ಬಂದಿ ಕಾಣೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪೂರಕ‌ ಪರೀಕ್ಷೆ ಫಲಿತಾಂಶ ಪ್ರಕಟ – ಬಾಲಕಿಯರೇ ಮೇಲುಗೈ

ಜೂನಿಯರ್ ಎಂಜಿನಿಯರ್ ಪಾತ್ರವೇನು?
ಭಾರತೀಯ ರೈಲ್ವೆಯಲ್ಲಿ ಟ್ರ‍್ಯಾಕ್ ಸರ್ಕ್ಯೂಟ್‌ಗಳು, ಪಾಯಿಂಟ್ ಯಂತ್ರಗಳು ಮತ್ತು ಇಂಟರ್‌ಲಾಕಿಂಗ್ ಸಿಸ್ಟಮ್‌ಗಳು ಸೇರಿದಂತೆ ಸಿಗ್ನಲಿಂಗ್ ಉಪಕರಣಗಳ ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿಯ ಜವಾಬ್ದಾರಿಯನ್ನು ಜೂನಿಯರ್ ಎಂಜಿನಿಯರ್ ನೋಡಿಕೊಳ್ಳುತ್ತಾರೆ. ರೈಲು ಸುರಕ್ಷಿತವಾಗಿ ಹಳಿಯಲ್ಲಿ ಸಂಚರಿಸಬಹುದೇ? ಬೇಡವೇ ಎಂಬುದನ್ನು ಖಾತರಿ ಪಡಿಸುವಲ್ಲಿ ಜೆಇ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಮೂಲಗಳ ಪ್ರಕಾರ, ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಬಹನಾಗಾ ಬಜಾರ್‌ನ ಸ್ಟೇಷನ್ ಮಾಸ್ಟರ್ ಸೇರಿದಂತೆ ಐವರು ರೈಲ್ವೆ ನೌಕರರು ಭಾಗಿಯಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಇತರ ನಾಲ್ವರು ಉದ್ಯೋಗಿಗಳು ಸಿಗ್ನಲಿಂಗ್ ಸಂಬಂಧಿತ ಕೆಲಸದ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅಪಘಾತದ ಸಮಯದಲ್ಲಿ ಕರ್ತವ್ಯದಲ್ಲಿದ್ದರು. ಇದನ್ನೂ ಓದಿ: Odisha Train Tragedy – ವಿಚಾರಣೆ ಎದುರಿಸಿದ್ದ ಜ್ಯೂನಿಯರ್‌ ಎಂಜಿನಿಯರ್‌ ನಾಪತ್ತೆ 

Share This Article