ಬೆಂಗಳೂರು: ಹೆಚ್‌ಸಿ ಮಹದೇವಪ್ಪ (HC Mahadevappa) ಅವರಿಗೆ ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ವಿಷಯಗಳ ಬಗ್ಗೆಯೇ ಆಸಕ್ತಿ ಜಾಸ್ತಿ ಎಂದು ಸಂಸದ ಡಿಕೆ ಸುರೇಶ್ (DK Suresh) ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರೇ (Siddaramaiah) ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಡಾ.ಹೆಚ್‌ಸಿ ಮಹದೇವಪ್ಪ ಹೇಳಿಕೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಸದಾಶಿವನಗರದಲ್ಲಿ ಮಾತನಾಡಿದ ಡಿಕೆ ಸುರೇಶ್, ಮಹದೇವಪ್ಪ ಹಿರಿಯರಿದ್ದಾರೆ. ಯಾವ ಯಾವ ಸಂದರ್ಭದಲ್ಲಿ ಯಾರ್ಯಾರಿಗೆ ಏನೇನು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಮಹದೇವಪ್ಪ ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಸಾಕಷ್ಟು ಐಡಿಯಾಲಜಿ ಹೊಂದಿದವರು. ಅವರದ್ದೇ ಆದ ರಾಜಕೀಯ ಶಕ್ತಿ ಇಟ್ಟುಕೊಂಡಿದ್ದಾರೆ. ಹಿರಿಯ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆಯದ್ದರ ಬಗ್ಗೆ ಆಸಕ್ತಿ ಜಾಸ್ತಿ ಇದೆ ಎಂದು ಮಹದೇವಪ್ಪ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತೆ ರಾಜಕೀಯ ವೈರಾಗ್ಯದ ಮಾತು:
ರಾಜಕೀಯ ನನಗೆ ಸರಿ ಎನಿಸುತ್ತಿಲ್ಲ. ಕೆಲಸ ಮಾಡಲು ನೆಮ್ಮದಿಯಿಲ್ಲ. ನನಗೆ ರೆಸ್ಟ್ ಬೇಕು. ನಾನು ಅಧಿಕಾರ ಬೇಡ ಎಂದು ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂದುಕೊಂಡಿದ್ದೇನೆ. ರಾಜಕಾರಣಿಗಳ ಬಗ್ಗೆ ಜನರಲ್ಲೂ ಮರ್ಯಾದೆ ಇಲ್ಲ, ಒಳಗಡೆಯೂ ಮರ್ಯಾದೆ ಇಲ್ಲ. ನಾನು ಅರ್ಜಿ ಹಾಕಿದರೆ ಪಕ್ಷ ಟಿಕೆಟ್ ಕೊಡುತ್ತದೆ. ಇಲ್ಲ ಎಂದರೆ ಬೇರೆಯವರಿಗೆ ಕೊಡುತ್ತದೆ. ಅವರು ಅಧಿಕಾರಕ್ಕಾಗಿ ಪರಿತಪಿಸುತ್ತಿದ್ದಾರೆ. ಇದು ಪಕ್ಕಾ ರಾಜಕಾರಣಿಗೆ ಸೆಟ್ ಆಗುತ್ತೆ ಎಂದು ತಿಳಿಸಿದ್ದಾರೆ.
ನಾನು ನನ್ನ ಮನಸ್ಸಿನಲ್ಲಿರುವ ವಿಚಾರವನ್ನು ಕಾರ್ಯಕರ್ತರ ಬಳಿ ತಿಳಿಸಿದ್ದೇನೆ. ಬೇರೆಯವರಿಗೆ ಅವಕಾಶ ಆಗಬೇಕು ಎಂಬ ಉದ್ದೇಶ ನನಗಿದೆ. ಇದಕ್ಕೆ ಸಾಕಷ್ಟು ಜನ ನಾಯಕರು ಇದ್ದಾರೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಇನ್ನೂ ಚುನಾವಣೆಗೆ 11 ತಿಂಗಳ ಅವಕಾಶ ಇದೆ. ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಸಿದ್ದು ಪರ ಮಹದೇವಪ್ಪ ಬಾಂಬ್ – ಕಾಂಗ್ರೆಸ್‍ನಲ್ಲಿ ಮತ್ತೆ ಸಿಎಂ ಕುರ್ಚಿ ಕಚ್ಚಾಟ
ಪಕ್ಷ ಸಂಘಟನೆ ಒಂದು ಭಾಗ, ಚುನಾವಣಾ ಸ್ಪರ್ಧೆ ಮಾಡಿ ಗೆಲ್ಲೊದು ಇನ್ನೊಂದು ಭಾಗ. ನನಗೆ ಕೆಲಸ ಮಾಡಿರುವ ಬಗ್ಗೆ ತೃಪ್ತಿಯಿದೆ. ಸಾಕಷ್ಟು ಜನ ನಾಯಕರು, ಪಕ್ಷ ಸಂಘಟನೆ ಮಾಡಿರುವ ಹಿರಿಯರು ಇದ್ದಾರೆ. ಅವರಿಗೆ ಅವಕಾಶ ಆಗಬೇಕು. ಈ ವಿಚಾರದಲ್ಲಿ ನನಗೆ ಬೇಸರವಿಲ್ಲ ಎಂದಿದ್ದಾರೆ.
ಕ್ಷೇತ್ರದ ಜನರ ಜೊತೆ ಖುಷಿಯಿಂದ ಕೆಲಸ ಮಾಡುತ್ತಾ ಇದ್ದೇನೆ. ವೈರಾಗ್ಯ ಎನ್ನುವುದು ನನಗೆ ಬಂದಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಶ್ರಮವಿಲ್ಲ. ಅಧಿಕಾರದಲ್ಲಿರುವವರ ಶ್ರಮವಿದೆ. ಎಲ್ಲಾ ಸಚಿವರು, ಶಾಸಕರ ಶ್ರಮವಿದೆ. ಅವರು ನೆಮ್ಮದಿಯಾಗಿ ಎಂಜಾಯ್ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ: ಯಡಿಯೂರಪ್ಪ