ಲಕ್ನೋ: ಒಂದೆಡೆ ಚಂಡಮಾರುತಕ್ಕೆ ಸಿಕ್ಕಿ ಜನ ನಲುಗುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ತಾಪಮಾನಕ್ಕೆ (High Temperature) ಬಲಿಯಾಗುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಬಿಸಿಲಿನ ತಾಪಕ್ಕೆ ಉತ್ತರ ಪ್ರದೇಶದಲ್ಲಿ (Uttar Pradesh) 54 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಹಾರದಲ್ಲಿ 44 ಮಂದಿ ಬಲಿಯಾಗಿದ್ದಾರೆ.
ಸಾವಿಗೆ ಬೇರೆ ಬೇರೆ ಕಾರಣವಿದ್ದರೂ ಬಿಸಿಲಿನ ತಾಪಮಾನ ಏರಿಕೆ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ತೀವ್ರ ಶಾಖದಿಂದಾಗಿ ಆಸ್ಪತ್ರೆಗೆ (Hospital) ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನ ದಾಖಲಾಗುತ್ತಿದೆ. ಇದನ್ನೂ ಓದಿ: ನಾಸಿಕ್‌ನ ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಪ್ರಕ್ರಿಯೆ ಆರಂಭ
ಏಕಾ ಏಕಿ ಮರಣ ಪ್ರಮಾಣ ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾರ್ವಜನಿಕರಲ್ಲಿ ಜ್ವರ, ಉಸಿರಾಟ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಆಸ್ಪತ್ರೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ಜೂನ್ 15 ರಂದು ಉತ್ತರ ಪ್ರದೇಶದಲ್ಲಿ 23 ಮಂದಿ ಮೃತಪಟ್ಟಿದ್ದರು. ಜೂನ್ 16 ರಂದು 20 ಮಂದಿ ಹಾಗೂ ಜೂನ್ 17 ರಂದು 11 ಮಂದಿ ಮೃತಪಟ್ಟಿದ್ದಾರೆ ಎಂದು ಬಲ್ಲಿಯಾ ಆಸ್ಪತ್ರೆ ವೈದ್ಯ ಎಸ್.ಕೆ ಯಾದವ್ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಬಿಹಾರದಲ್ಲೂ ಬಿಸಿಲಿನ ತಾಪಕ್ಕೆ 44 ಮಂದಿ ಬಲಿಯಾಗಿರುವುದು ಕಂಡುಬಂದಿದೆ.ಇದನ್ನೂ ಓದಿ: ಸಾವರ್ಕರ್, ಹೆಡ್ಗೆವಾರ್ ಅವರ ಅಧ್ಯಾಯಗಳನ್ನು ಪಠ್ಯದಿಂದ ತೆಗೆದು ಹಾಕಿರುವುದು ದುರದೃಷ್ಟಕರ: ನಿತಿನ್ ಗಡ್ಕರಿ
ಸದ್ಯ ಉತ್ತರ ಪ್ರದೇಶದಲ್ಲಿ ಅತಿಯಾದ ಬಿಸಿಲಿನ ತಾಪದಿಂದ ಬೇರೆ ಯಾವುದಾರೂ ರೋಗಗಳು ಕಾಣಿಸಿಕೊಂಡಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಬಿ.ಪಿ ತಿವಾರಿ ನೇತೃತ್ವದ ತಂಡ ಸಿದ್ಧತೆ ಮಾಡಿಕೊಂಡಿದೆ. ಏಕೆಂದರೆ ಅತಿಯಾದ ಬಿಸಿಲಿನ ತಾಪಮಾನ ಹಾಗೂ ಶೀತ ವಾತಾವರಣ ಮಧುಮೇಹ, ರಕ್ತದೊತ್ತಡ ಹಾಗೂ ಉಸಿರಾಟ ಸಮಸ್ಯೆ ಹೊಂದಿರುವವರಿಗೆ ಇನ್ನಷ್ಟು ಅಪಾಯ ಉಂಟು ಮಾಡುವ ಸಾಧ್ಯತೆ ಇದೆ.
ರೋಗಿಗಳನ್ನ ಹೆಗಲಮೇಲೆ ಹೊತ್ತು ಸಾಗಿಸ್ತಿದ್ದಾರೆ:
ಸದ್ಯ ಉತ್ತರ ಪ್ರದೇಶದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ರೋಗಿಗಳನ್ನು ಸಾಗಿಸಲು ಸ್ಟ್ರೆಚರ್‌ಗಳ ಕೊರತೆಯಾಗಿದೆ. ಕೆಲವು ಕಡೆ ಆಸ್ಪತ್ರೆ ಸಿಬ್ಬಂದಿಗಳೇ ರೋಗಿಗಳನ್ನ ತುರ್ತು ವಿಭಾಗಕ್ಕೆ ಹೆಗಲಮೇಲೆ ಹೊತ್ತುಕೊಂಡು ಬರುತ್ತಿದ್ದಾರೆ. ಏಕಕಾಲಕ್ಕೆ ರೋಗಿಗಳು ದಾಖಲಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಹೇಳಿದ್ದಾರೆ.