ಸ್ಯಾಂಡಲ್ ವುಡ್ ನ ‘ಇತ್ಯಾದಿ’ (Ityadi) ಹೆಸರಿನ ಚಿತ್ರವು ಶೂಟಿಂಗ್ ಮುಗಿಸಿಕೊಂಡು ಸೆನ್ಸಾರ್‌ಗೆ ಹೋಗಲು ಅಣಿಯಾಗುತ್ತಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೈಲರ್ (Trailer) ಬಿಡುಗಡೆಯ ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಚರಣ್ ದೇವ್ ಕ್ರಿಯೇಶನ್ಸ್, ಅದ್ವೈತ ಫಿಲಿಂಸ್ ಹಾಗೂ ನೀಲಕಂಠ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಜಂಟಿಯಾಗಿ ನಿರ್ಮಾಣ ಮಾಡಿದ ಸಿನಿಮಾ ಇದಾಗಿದೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್ ಬಾಸ್ ವಿಜೇತ, ನಟ, ನಿರ್ದೇಶಕ ಪ್ರಥಮ್ (Pratham) ಮಾತನಾಡಿ ‘ತುಣುಕುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಡಿ.ಯೋಗರಾಜ್ ಅವರಿಗೆ ಯೋಗ ಹುಡುಕಿಕೊಂಡು ಬರಲಿ. ನಿನ್ನೆಯಷ್ಟೇ ವಿಕಟಕವಿ ಯೋಗರಾಜ ಭಟ್ ಅವರ ಚಿತ್ರದ ಸಮಾರಂಭ ನಡೆದಿದೆ. ಇಂದು ಡಿ.ಯೋಗರಾಜ ಅವರದಾಗಿದೆ. ಭಟ್ಟರು ಗೊಂದಲ ಆಗಬಾರದೆಂದು ಮೀಸೆ ತೆಗೆಸಿಕೊಂಡಿದ್ದಾರೆ ಎಂದು ಅತಿಥಿಗಳನ್ನು ನಗಿಸಿದರು. ಮಾತು ಮುಂದುವರೆಸುತ್ತಾ ಪ್ರತಿಭಾವಂತ ತಂಡ ಕೆಲಸ ಮಾಡಿದೆ. ಹಿಂದೆಯೆಲ್ಲಾ ಒಂದು ಸಿನಿಮಾ ತೆರೆಗೆ ಬರುವ ಸಮಯದಲ್ಲಿ ಹೊಸ ನಿರ್ಮಾಪಕರು ಪರಿಚಯವಾಗುತ್ತಿದ್ದರು. ಅದೇ ರೀತಿ ಇಂದು ಆಗುತ್ತಿರುವುದು ಸಂತಸ ತಂದಿದೆ. ನಿಮ್ಮಲ್ಲಿರುವ ಕ್ರಿಯಾಶೀಲತೆಗೆ ಮತ್ತಷ್ಟು ಒಳ್ಳೆಯ ಚಿತ್ರಗಳು ಬರಲಿ. ನನ್ನ ಕಡೆಯಿಂದ ನಿಮ್ಮಗೆಲ್ಲರಿಗೂ ಶುಭಹಾರೈಕೆಗಳು’ ಎಂದರು. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್
ಸಿನಿಮಾಗೆ ನಿರ್ದೇಶನ ಮಾಡಿರುವ ಡಿ.ಯೋಗರಾಜ್ (D. Yogaraj) ಹೇಳುವಂತೆ ಇದೊಂದು ಮರ್ಡರ್ ಮಿಸ್ಟ್ರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಶೇಕಡ 75ರಷ್ಟು ಕಾಲ್ಪನಿಕ, ಉಳಿದವು ಸತ್ಯ ಘಟನೆಯಾಗಿರುತ್ತದೆ. ಶೃಂಗೇರಿ ಬಳಿ ಇರುವ ಬಿಳಿಗದ್ದೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆಯಾಗಿರುತ್ತದೆ. ಅದು ಕೊನೆಗೂ ಕಲ್ಲಾಗೇ ಹುಟ್ಟಿಕೊಂಡಿರುತ್ತದೆ. ಊರಿನಲ್ಲಿರುವ ಗರ್ಭಣಿಯರು ಆ ಜಾಗಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಿರುತ್ತಾರೆ. ಇದನ್ನು ಮಾಡುವವರು ಯಾರು? ಯಾಕೆ ನಡೀತಾ ಇದೆ? ಎಂಬುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ. ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುಂದರ ತಾಣಗಳಲ್ಲಿ62 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಅಂತ ಮಾಹಿತಿ ತೆರೆದಿಟ್ಟರು.
ನಾಯಕರುಗಳಾದ ಮಹೇಶ್.ಬಿ, ಸಚ್ಚಿನ್, ನಾಯಕಿಯರಾದ ಅರ್ಚನಾ ಉದಯಕುಮಾರ್, ಡಾ.ಸೌಮ್ಯ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದಷ್ಟೇ ಹೇಳಿದರು. ತಾರಾಗಣದಲ್ಲಿ ಆಂಜನಪ್ಪ, ತಮಿಳು ಖ್ಯಾತ ನಟ ನಾಗೇಶ್ ಪುತ್ರ ಆನಂದಬಾಬು, ಮಂಜುಳಾ ವೆಂಕಟೇಶ್, ಮಣಿ ಮುಂತಾದವರು ನಟಿಸಿದ್ದಾರೆ. ಎರಡು ಹಾಡುಗಳಿಗೆ ಸಂಗೀತ ಪುಣ್ಯೇಶ್, ಛಾಯಾಗ್ರಹಣ ಭರಣಿ-ಡಿ.ಯೋಗರಾಜ್-ಲಕ್ಷೀಕಾಂತ್, ಸಂಕಲನ ಸಂತೋಷ್ ನಿರ್ವಹಿಸಿದ್ದಾರೆ.
ನಂತರ ಡಿ.ಯೋಗರಾಜ್ ನಿರ್ದೇಶನ ಮಾಡುತ್ತಿರುವ ‘ಉಳಿ’ (ULI) ಸಿನಿಮಾದ ಪೋಸ್ಟರ್‌ನ್ನು ಪ್ರಥಮ್ ಅನಾವರಣಗೊಳಿಸಿದರು. ಪುತ್ರ ಶ್ರೀರಾಮ್ ಅಭಿಷೇಕ್ ಅವರನ್ನು ನಾಯಕ ಮಾಡುವ ಸಲುವಾಗಿ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದು, ಇವರೊಂದಿಗೆ ನಿರ್ದೇಶಕರು ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ. ಕಲಾವಿದರುಗಳಾದ ಸುರಕ್ಷಿತ, ಅರ್ಚನಾ ಉದಯಕುಮಾರ್, ಮಂಜುಳಾ ವೆಂಕಟೇಶ್ ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದಾರೆ. ಸಂಗೀತ ಸ್ಪುಗೆನ್ ಪೌಲ್, ಸಂಕಲನ ಶಂಕರ್, ಛಾಯಾಗ್ರಹಣ ದೇವರಾಜ್, ರಚನೆ-ಸಂಭಾಷಣೆ ಶಂಕರ್‌ಸನ್ ಅವರದಾಗಿದೆ. ನೀಲಕಂಠ ಫಿಲಂಸ್ ಬ್ಯಾನರ್‌ದಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ.