5 ಗ್ಯಾರಂಟಿ ಘೋಷಣೆ – ಯಾವ ಯೋಜನೆಗೆ ಎಷ್ಟು ಹಣ ಬೇಕು?

Public TV
2 Min Read
Siddaramaiah 2

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ (Congress) ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು (Guarantee) ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ಘೋಷಿಸಿದ್ದಾರೆ. ಬಹು ನಿರೀಕ್ಷಿತ ಘೋಷಣೆಗಳು ಇವಾಗಿದ್ದು, ಇದರಿಂದ ಸರ್ಕಾರಕ್ಕೆ ಎಷ್ಟು ಹೊರೆಯಾಗಬಹುದು ಎಂಬುದು ಎಲ್ಲರಿಗೂ ಮೂಡಿರುವ ಪ್ರಶ್ನೆ.

ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆ ಜಾರಿಗೆ ವರ್ಷಕ್ಕೆ 50-55 ಸಾವಿರ ಕೋಟಿ ರೂ. ಹೊರೆಯಾಗಬಹುದು ಎಂದು ಅಂದಾಜಿಸಲಾಗಿದೆ.

Siddaramaiah

ಗೃಹಜ್ಯೋತಿ:
ಕಾಂಗ್ರೆಸ್ ಘೋಷಿಸಿರುವ ಮೊದಲ ಗ್ಯಾರಂಟಿ ಗೃಹಜ್ಯೋತಿ ಯೋಜನೆಯಾಗಿದ್ದು, ಷರತ್ತಿನೊಂದಿಗೆ 200 ಯೂನಿಟ್‌ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಆಗಸ್ಟ್‌ನಿಂದ ಬರುವ ಬಿಲ್‌ನಿಂದ ಯೋಜನೆ ಜಾರಿಯಾಗಲಿದೆ. ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಯೋಜನೆಯಿಂದ ವಾರ್ಷಿಕವಾಗಿ ಸರ್ಕಾರಕ್ಕೆ ಅಂದಾಜು 12 ರಿಂದ 15 ಸಾವಿರ ಕೋಟಿ ರೂ. ಖರ್ಚಾಗಬಹುದು.

Congress Guarantee Electricity

ಗೃಹಲಕ್ಷ್ಮಿ:
ಮನೆ ಒಡತಿಯ ಖಾತೆಗೆ ಪ್ರತಿ ತಿಂಗಳು 2,000 ರೂ. ಬರುವಂತಹ ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15ರಿಂದ ಜಾರಿಗೆ ಬರಲಿದೆ. ಈ ಯೋಜನೆಯಿಂದ 1 ಕೋಟಿ ಫಲಾನುಭವಿಗಳಿಗೆ ವಾರ್ಷಿಕವಾಗಿ ಅಂದಾಜು 24 ಸಾವಿರ ಕೋಟಿ ರೂ. ಸರ್ಕಾರದಿಂದ ಖರ್ಚಾಗಲಿದೆ. ಆದರೆ ಅರ್ಜಿ ಸಲ್ಲಿಕೆ ಬಳಿಕವೇ ಈ ಹೊರೆಯ ಸ್ಪಷ್ಟ ಲೆಕ್ಕ ಸಿಗಲಿದೆ.

Gruha Lakshmi

ಶಕ್ತಿ:
ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ, ತೀವ್ರ ಕುತೂಹಲ ಕೆರಳಿಸಿದ ಶಕ್ತಿ ಯೋಜನೆ ಜೂನ್ 11 ರಿಂದ ಜಾರಿಗೆ ಬರಲಿದೆ. ಈ ಯೋಜನೆಯಿಂದ ವಾರ್ಷಿಕವಾಗಿ ಸರ್ಕಾರಕ್ಕೆ ಸುಮಾರು 3,500 ರಿಂದ 4,000 ಕೋಟಿ ರೂ. ಹೊರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಎಲ್ಲಾ ನಿಗಮಗಳೂ ಸೇರಿ 22 ಸಾವಿರ ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ ಇರಲಿದೆ. ರಾಜಹಂಸ, ಎಸಿ, ಸ್ಲೀಪರ್‌ಗಳು ಸೇರಿ 1,728 ಬಸ್‌ಗಳಲ್ಲಿ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಅಂತರಾಜ್ಯ ಬಸ್‌ಗಳಲ್ಲಿಯೂ ಪ್ರಯಾಣಕ್ಕೆ ಅವಕಾಶ ಇಲ್ಲ.

BPL CARD

ಯುವನಿಧಿ:
ಯುವ ನಿಧಿ ಯೋಜನೆಯನ್ನು 2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗೆ ನೀಡಲು ತೀರ್ಮಾನಿಸಲಾಗಿದೆ. ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡಲಾಗುತ್ತದೆ. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ 1,200 ರಿಂದ 1,300 ಕೋಟಿ ರೂ. ಹೊರೆಯಾಗಲಿದೆ.

ಅನ್ನಭಾಗ್ಯ:
ಜುಲೈ 1 ರಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ಅಂದಾಜು 10 ಸಾವಿರ ಕೋಟಿ ರೂ. ಹೊರೆಯಾಗಲಿದೆ.

ಹಣ ಹೊಂದಿಕೆ ಹೇಗೆ?
ಚುನಾವಣಾ ಪ್ರಚಾರದಲ್ಲಿ ಈ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂದು ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ 40% ಕಮಿಷನ್ ಹಣವನ್ನು ಇದಕ್ಕೆ ವಿನಿಯೋಗಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇಂದು ಮಾಧ್ಯಮಗಳು ಈ ಯೋಜನೆಗಳಿಗೆ ಹೇಗೆ ಹಣವನ್ನು ಹೊಂದಿಸಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಿಲ್ಲ.

ಆಸ್ತಿ ತೆರಿಗೆ ಹೆಚ್ಚಳ, ಪಿಎಂ ಕಿಸಾನ್ ಸಮ್ಮನ್ ಯೋಜನೆಗೆ ಕತ್ತರಿ, ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸೆಸ್, ಮದ್ಯದ ಮೆಲೆ ತೆರಿಗೆ ಹಾಕುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಇಲ್ಲಿಯವರೆಗೆ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ. ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ಉತ್ತರ ಸಿಗಲಿದೆ.

Share This Article