ಮಡಿಕೇರಿ: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ (Congress Guarantee) ಘೋಷಣೆಯಾದ ಬೆನ್ನಲ್ಲೇ ರಾಜ್ಯಾದ್ಯಂತ ಜನ ವಿದ್ಯುತ್ ಬಿಲ್ ಕಟ್ಟೋದಿಲ್ಲ ಅಂತಾ ಪಟ್ಟು ಹಿಡಿಯುತ್ತಿದ್ದಾರೆ. ಈ ನಡುವೆ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಯೇ (Gram Panchayat) ಲಕ್ಷ, ಲಕ್ಷ ವಿದ್ಯುತ್ ಬಿಲ್ (Electricity Bill) ಬಾಕಿ ಉಳಿಸಿಕೊಂಡ ಪರಿಣಾಮ ಕಳೆದ 15 ದಿನಗಳಿಂದ ಕತ್ತಲೆಯಲ್ಲಿ ಕಾಲ ದೂಡುತ್ತಿದೆ. ಇದರಿಂದಾಗಿ ದಿನ ನಿತ್ಯ ಪಂಚಾಯಿತಿಗೆ ಭೇಟಿ ನೀಡುವ ಸಾರ್ವಜನಿಕರ ಕೆಲಸಗಳೂ ಆಗದೇ ಜನರು ಪರದಾಡುತ್ತಿದ್ದಾರೆ. ಪಂಚಾಯತಿ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು… ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ಬರೋಬ್ಬರಿ 9.91 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಕಳೆದ ನಾಲ್ಕೈದು ತಿಂಗಳಿಂದ ವಿದ್ಯುತ್ ಬಿಲ್ಲನ್ನು ಪಾವತಿಸದ ಪರಿಣಾಮ ಚೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ. ಪಂಚಾಯಿತಿ ಕಟ್ಟಡದ ಫ್ಯೂಜ್ ಅನ್ನೇ ಕಿತ್ತುಕೊಂಡು ಹೋಗಿದ್ದು, ಕತ್ತಲಲ್ಲಿ ದಿನದೂಡುವಂತೆ ಮಾಡಿದ್ದಾರೆ. ಸ್ವತಃ ಪಿಡಿಒ ಕೂಡ ಏನಾದರೂ ಬರೆಯಬೇಕೆಂದರೂ ಸಿಬ್ಬಂದಿಯಿಂದ ಮೊಬೈಲ್ ಟಾರ್ಚ್ ಹಾಕಿಸಿ ಬರೆಯಬೇಕಾಗಿದೆ.
ಹೊರಗಿನಿಂದ ಯಾರಾದರೂ ಬಂದರೆ ಸಿಬ್ಬಂದಿಗೆ ಕೂಡಲೇ ಮೊಬೈಲ್ ಟಾರ್ಚ್ ಆಫ್ ಮಾಡುವಂತೆ ನಾಚಿಕೆಪಟ್ಟುಕೊಂಡು ಹೇಳುವಂತಾಗಿದೆ. ಪಂಚಾಯಿತಿಯಿಂದ ವಿದ್ಯುತ್ ಇಲಾಖೆಗೆ ಹಣ ಯಾಕೆ ಪಾವತಿ ಮಾಡಿಲ್ಲ ಎಂದು ಪಿಡಿಒ ಕೇಳಿದ್ರೆ. ನಾನು ಜನವರಿ ತಿಂಗಳಿನಲ್ಲಿ ಈ ಪಂಚಾಯಿತಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಆ ಸಮಯಕ್ಕೆ 7 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಲಾಗಿತ್ತು. ಸಂಗ್ರಹವಾಗುತ್ತಿರುವ ತೆರಿಗೆ ಹಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿದ್ಯುತ್ ಬಿಲ್ಲನ್ನು ಪಾವತಿಸುತ್ತಿದ್ದೇವೆ. ಆದ್ರೆ ಬೀದಿ ದೀಪ, ಕುಡಿಯುವ ನೀರಿನ ಮೋಟಾರ್ ಗಳ ಬಿಲ್ಲು ಸೇರಿದಂತೆ ತಿಂಗಳಿಗೆ 1.70 ಲಕ್ಷದಿಂದ 2 ಲಕ್ಷದವರೆಗೆ ವಿದ್ಯುತ್ ಬಿಲ್ಲು ಬರುತ್ತದೆ. ಹೀಗಾಗಿ ಅದು ಜಾಸ್ತಿಯಾಗುತ್ತಲೇ ಇದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೂ ಕೂಡಲೇ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿ ತೆರಿಗೆ ಸಂಗ್ರಹಿಸುತ್ತೇವೆ ಎಂದು ಸಬೂಬು ನೀಡಿದ್ದಾರೆ.
ಇನ್ನೂ ಪಂಚಾಯಿತಿ ಅಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಗ್ರಾಮ ಪಂಚಾಯಿತಿಗೆ ಬರುವ ಆದಾಯ ಮೂಲಗಳಿಗೂ ಸಂಕಷ್ಟ ಎದುರಾಗಿದೆ. ಹೀಗಾಗಿ ವಿದ್ಯುತ್ ಹಣ ಪಾವತಿ ಮಾಡಲು ಆಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ನೂತನ ಜನರು ಪಂಚಾಯತಿ ಕಚೇರಿಗೆ ಬಂದು ವಾಪಸ್ಸು ಅಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಕ್ಷೇತ್ರದ ಶಾಸಕ ಮಂಥರ್ ಗೌಡ ಅವರನ್ನು ಕೇಳಿದ್ರೆ. ಪಂಚಾಯಿತಿ ವಿದ್ಯುತ್ ಸಮಸ್ಯೆ ಬಗ್ಗೆ ಈಗಾಗಲೇ ತಮ್ಮ ಗಮನಕ್ಕೆ ಬಂದಿದೆ. ಸಿಒ ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳ ಜೋತೆ ಮಾತಾನಾಡಿ ತಾತ್ಕಾಲಿಕವಾಗಿಯಾದರೂ ಕರೆಂಟ್ ಕನೆಕ್ಷನ್ ಮಾಡಿಸಲಾಗುತ್ತದೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಿಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.