– ಚಿಕಿತ್ಸೆಗೆ ಸ್ಪಂದಿಸುತ್ತಿರೋ ಮಕ್ಕಳು
ಮೈಸೂರು: ಜಿಲ್ಲೆಯ ಕುರುಬೂರು (Kuruburu Accident) ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಉಳಿದಂತೆ ಇಬ್ಬರು ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಗಾಯಾಳು ಶಶಿಕುಮಾರ್ ಹಾಗೂ ಜನಾರ್ಧನ್‍ಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಶಶಿಕುಮಾರ್ ಸ್ಥಿತಿ ಗಂಭೀರವಾಗಿದೆ. ಇನ್ನು ಕಾರಿನಲ್ಲಿದ್ದ ಮಗು ಪುನೀತ್ ಹಾಗೂ ಬಸ್‍ನಲ್ಲಿದ್ದ ಮಗುವಿಗೆ ಕೂಡ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದ 10 ಮಂದಿಯ ಮೃತದೇಹಗಳನ್ನು ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಳ್ಳಾರಿಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಮಂಜುನಾಥ್ (35), ಪೂರ್ಣಿಮಾ (30), ಪವನ್ (10), ಕಾರ್ತಿಕ್ (8), ಸಂದೀಪ್ (24), ಸುಜಾತ (40), ಕೊಟ್ರೇಶ್ (45), ಗಾಯಿತ್ರಿ (35), ಶ್ರೇಯಾ (3) ಮೃತದೇಹ ಕುಟುಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ನಡೆದಿದ್ದೇನು..?: ಮೈಸೂರಿಗೆ ರೈಲಿನಲ್ಲಿ ಬಂದಿದ್ದ ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ ಮಂದಿ ಬೆಳಗ್ಗೆ ಇನ್ನೋವಾ ಕಾರು (Innova Car) ಬಾಡಿಗೆ ಮಾಡಿಕೊಂಡು ಚಾಮುಂಡಿ ಬೆಟ್ಟ, ಬಿಆರ್ ಹಿಲ್ಸ್‍ಗೆ ತೆರಳಿದ್ರು. ಅಲ್ಲಿಂದ 5 ಗಂಟೆಯ ರೈಲು ಹತ್ತಲು ಮೈಸೂರಿಗೆ ವಾಪಸ್ ಆಗುವಾಗ ಪಿಂಜಾರಪೋಲ್ ಸಮೀಪದ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಇಡೀ ಇನ್ನೋವಾ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪ್ಪಚ್ಚಿಯಾದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹರಸಾಹಸ ಮಾಡಿ ಹೊರತೆಗೆಯಬೇಕಾಯಿತು. ಇದನ್ನೂ ಓದಿ: ಮೈಸೂರು ಬಳಿ ರಸ್ತೆ ಅಪಘಾತಕ್ಕೆ 10 ಬಲಿ – ಪರಿಹಾರ ಘೋಷಿಸಿದ ಸಿಎಂ
ಅಪಘಾತದ ದೃಶ್ಯ ಬಸ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದುರಂತಕ್ಕೆ ಟೋಲ್ ಮತ್ತು ಲೋಕೋಪಯೋಗಿ ಇಲಾಖೆಯೇ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟೋಲ್ ವಸೂಲಿ ಮಾಡ್ತಾರೆ. ಆದರೆ ತಿರುವಿನಲ್ಲಿ ಒಂದು ಸೂಚನಾ ಫಲಕವನ್ನು ಅಳವಡಿಸಿಲ್ಲ. ಗಿಡಗಂಟೆಗಳನ್ನು ತೆರವು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಂಗನಕಲ್ಲಿನಲ್ಲಿ ಮೃತರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ. ಈ ಮಧ್ಯೆ, ದುರಂತಕ್ಕೆ ಪ್ರಧಾನಿ ಮೋದಿ (Narendra Modi) ಸಿಎಂ ಸಿದ್ದರಾಮಯ್ಯ (Siddaramaiah) ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರಪತಿ ಮುರ್ಮು (Droupadi Murmu) ಅವರು ಸಂತಾಪ ಸೂಚಿಸಿದ್ದಾರೆ.