ಭಾನುವಾರ ನೂತನ ಸಂಸತ್ ಭವನ ಉದ್ಘಾಟನೆ – ಏನಿದರ ವಿಶೇಷತೆ?

Public TV
2 Min Read
new parliament building 2

ನವದೆಹಲಿ: ದೇಶದಲ್ಲಿ ನಾಳೆ ಹೊಸ ಶಕೆಗೆ ಬುನಾದಿ ಬೀಳಲಿದೆ. ವೀರ್ ಸಾವರ್ಕರ್ ಜಯಂತಿಯಾದ ನಾಳೆ (ಮೇ 28) ಹೊಸ ಸಂಸತ್ ಭವನವನ್ನು (New Parliament Building) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿವೆ.

new parliament building1

96 ವರ್ಷದಷ್ಟು ಹಳೆಯದಾದ ಸಂಸತ್ ಭವನ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಇಲ್ಲದ ಕಾರಣ ಹೊಸ ಸಂಸತ್ ಭವನದ ಅಗತ್ಯ ಬಿದ್ದಿತ್ತು. ಸೆಂಟ್ರಲ್ ವಿಸ್ತಾ ರಿ-ಡೆವಲಪ್ಮೆಂಟ್ ಪ್ರಾಜೆಕ್ಟ್ ಭಾಗವಾಗಿ ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಭವನವನ್ನು ಟಾಟಾ ಪ್ರಾಜೆಕ್ಟ್÷್ಸ ಕಂಪನಿ ಕೇವಲ ಎರಡೂವರೆ ವರ್ಷದಲ್ಲಿ ಅದ್ಭುತವಾಗಿ ನಿರ್ಮಿಸಿದೆ. ಇದರ ವೀಡಿಯೋವನ್ನು ಶುಕ್ರವಾರ ಸಂಜೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಅನಾವರಣ ಮಾಡಿದ್ದರು. 2020ರ ಡಿಸೆಂಬರ್ 10ರಂದು ಪ್ರಧಾನಿ ಭೂಮಿಪೂಜೆ ನೆರವೇರಿಸಿದ್ದರು. ಇದೀಗ ನೂತನ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಇದನ್ನೂ ಓದಿ: ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು

ಹೊಸ ಸಂಸತ್ ಭವನದ ವೈಶಿಷ್ಟ್ಯ!
ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್. ಹೊಸ ಸಂಸತ್ ಭವನದಲ್ಲಿ 888 ಲೋಕಸಭಾ ಸದಸ್ಯರು ಮತ್ತು 384 ರಾಜ್ಯ ಸಭಾ ಸದಸ್ಯರು ಸೇರಿ ಒಟ್ಟು 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಿದೆ. ಜ್ಞಾನದ್ವಾರ, ಶಕ್ತಿದ್ವಾರ ಹಾಗೂ ಕರ್ಮದ್ವಾರ ಎಂಬ ಮೂರು ಪ್ರಮುಖ ದ್ವಾರಗಳ ನಿರ್ಮಾಣ, ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರ.

new parliament building2

ಭವನದ ಮೇಲೆ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿರೂಪವಿದೆ. ಇದರ ತೂಕ ಅಂದಾಜು 9,500 ಕೆ.ಜಿ, 6.5 ಮೀಟರ್ ಎತ್ತರ. ಕೋನಾರ್ಕ್ನ ಸೂರ್ಯ ದೇವಾಲಯದ ಚಕ್ರದ ಮಾದರಿಯೊಂದಿಗೆ ಬಹುಮುಖಿ ಕೌಟಿಲ್ಯನ ಭಾವಚಿತ್ರವನ್ನು ಕಟ್ಟಡದಲ್ಲಿ ಸ್ಥಾಪಿಸಲಾಗಿದೆ. ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗಿದೆ.

ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಭಾಂಗಣದಲ್ಲಿ ಇಡಲಾಗಿದೆ. ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು ಮತ್ತು ಊಟದ ಕೋಣೆಗಳನ್ನು ಸಹ ಹೊಂದಿದೆ. ಕಟ್ಟಡವು ಲೋಕಸಭಾ, ರಾಜ್ಯಸಭಾ, ಕೇಂದ್ರೀಯ ಹಾಲ್ ಮತ್ತು ಅಧಿಕಾರಿಗಳ ಕಚೇರಿಗಳನ್ನು ಒಳಗೊಂಡಿದೆ. ಲೋಕಸಭೆಯು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಹಾಗೆ ವಿನ್ಯಾಸಗೊಳಿಸಲಾಗಿದೆ. ರಾಜ್ಯಸಭೆಯು ಭಾರತದ ರಾಷ್ಟ್ರೀಯ ಹೂವು ಎನಿಸಿಕೊಂಡಿರುವ ಕಮಲವನ್ನು ಹೋಲುತ್ತದೆ. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

new parliament building3

ಸಂಪೂರ್ಣ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಪೇಪರ್‌ಲೇಸ್ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಭಾಷ್ಯಂತರದ ಸಮಸ್ಯೆ ತೆಗೆದಹಾಕಲು ಸಾಕಷ್ಟು ಕ್ರಮ ತೆಗೆದುಕೊಂಡಿದೆ. 1947 ರಲ್ಲಿ ಭಾರತ ಬ್ರಿಟಿಷ್ ಆಡಳಿತದಿಂದ ಮುಕ್ತವಾದ ಬಳಿಕ ಅಧಿಕಾರ ಹಸ್ತಾಂತರದ ಸಂಕೇತವಾಗಿ ಆಗಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವೀಕರಿಸಿದ ಹೊನ್ನಿನ ರಾಜದಂಡವನ್ನು ಹೊಸ ಸಂಸತ್ ಭವನದಲ್ಲಿ ಇಡಲಾಗುತ್ತೆ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಸ್ ಚಂದ್ರ ಬೋಸ್ ಮತ್ತು ದೇಶದ ಪ್ರಧಾನ ಮಂತ್ರಿಗಳ ಭಾವಚಿತ್ರಗಳನ್ನು ಹೊಂದಿರುತ್ತದೆ. 2020ರಲ್ಲಿ ಟಾಟಾ ಪ್ರಾಜೆಕ್ಟ್ಸ್‌ಗೆ ನಿರ್ಮಾಣದ ಹೊಣೆ ವಹಿಸಲಾಯಿತು. ಆಗ 971 ಕೋಟಿ ರೂಪಾಯಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿತ್ತು. ನಂತರ ಕಚ್ಚಾ ಸಾಮಗ್ರಿ ದರ ಹೆಚ್ಚಳದಿಂದಾಗಿ ಯೋಜನಾ ವೆಚ್ಚವನ್ನು 1,200 ಕೋಟಿ ರೂಪಾಯಿಗೆ ಏರಿಸಲಾಯಿತು. ಕಳೆದ ವರ್ಷದ ನವೆಂಬರ್ ಒಳಗಡೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿ ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್ ಮತ್ತು ಇತರೆ ಸಮಸ್ಯೆಗಳಿಂದಾಗಿ ಸ್ವಲ್ಪ ವಿಳಂಬವಾಯಿತು. ಇದನ್ನೂ ಓದಿ: 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

Share This Article