ಕಾಂಗ್ರೆಸ್ ಹೈಕಮಾಂಡ್‌ಗೆ ಕಗ್ಗಂಟಾದ ಸಿಎಂ ಆಯ್ಕೆ; ಡಿಕೆ-ಸಿದ್ದು ಜೊತೆ ಖರ್ಗೆ ಮಾತುಕತೆ ವಿಫಲ – ನಾಳೆ ಮತ್ತೆ ಸಭೆ

Public TV
2 Min Read
mallikarjun kharge meeting

ನವದೆಹಲಿ/ಬೆಂಗಳೂರು: ನೂತನ ಮುಖ್ಯಮಂತ್ರಿಯ ಆಯ್ಕೆ ವಿಚಾರದಲ್ಲಿ ಸತತ ಮೂರನೇ ದಿನವೂ ಸಂದಿಗ್ಧತೆ ಮುಂದುವರಿದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಫೈಟ್ ಮುಂದುವರಿದಿದ್ದು, ಉಭಯ ನಾಯಕರ ಜೊತೆ ದೆಹಲಿಯಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ನಡೆಸಿದ ಮಾತುಕತೆ ವಿಫಲವಾಗಿದೆ.

ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪೈಕಿ ಯಾರನ್ನು ಸಿಎಂ ಮಾಡಬೇಕು? ಪಕ್ಷ ಮತ್ತು ರಾಜ್ಯದ ಹಿತದೃಷ್ಟಿಯಿಂದ ಯಾರನ್ನು ಸಿಎಂ ಮಾಡಿದ್ರೆ ಒಳಿತು ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತಲೆಕೆಡಿಸಿಕೊಂಡಿದೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗಲೆಂದು ಕೋಲಾರಮ್ಮನಿಗೆ ಈಡುಗಾಯಿ ಸೇವೆ

siddaramaiah dk shivakumar1

ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಸಭೆಗಳ ಮೇಲೆ ಸಭೆಗಳು ನಡೆದಿವೆ. ಮೊದಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಪ್ರತ್ಯೇಕ ಸಭೆ ನಡೆಸಿದ್ರು. ನಂತರ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಮೀಟಿಂಗ್ ಮಾಡಿದ್ರು. ಸಂಜೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ ಜೊತೆ 45 ನಿಮಿಷ, ಸಿದ್ದರಾಮಯ್ಯ ಜೊತೆ ಒಂದೂವರೆ ಗಂಟೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ರು. ಇಬ್ಬರ ವಾದಗಳನ್ನು ಆಲಿಸಿದ ಮಲ್ಲಿಕಾರ್ಜುನ ಖರ್ಗೆ, ಕೆಲವೊಂದು ವಿಚಾರ ವಿವರಿಸಿ ಮನವೊಲಿಸಲು ನೋಡಿದ್ರು. ಆದರೆ ಉಭಯ ನಾಯಕರು ಮಾತ್ರ ಹಿಡಿದ ಪಟ್ಟನ್ನು ಬಿಡಲಿಲ್ಲ. ಹೀಗಾಗಿ ಖರ್ಗೆ ನಡೆಸಿದ ಮನವೊಲಿಕೆ ಪ್ರಯತ್ನಗಳು ವಿಫಲವಾದವು.

ಸದ್ಯದ ಮಟ್ಟಿಗೆ ಇಬ್ಬರು ನಾಯಕರಿಗೂ ದೆಹಲಿಯಲ್ಲಿಯೇ ಉಳಿಯುವಂತೆ ಖರ್ಗೆ ಸೂಚಿಸಿದರು. ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಕೂಡ ಯಾವುದೇ ಹೇಳಿಕೆ ನೀಡದೇ ನಿರ್ಗಮಿಸಿದರು. ಖರ್ಗೆ ನಿವಾಸದಿಂದ ಸಿದ್ದರಾಮಯ್ಯ ನೇರವಾಗಿ ಕೆಸಿ ವೇಣುಗೋಪಾಲ್ ನಿವಾಸಕ್ಕೆ ತೆರಳಿದರು. ವಿಶೇಷ ಅಂದ್ರೆ, ಯಾರ ಮುಖದಲ್ಲೂ ಮಂದಹಾಸ ಕಾಣಲಿಲ್ಲ. ಇದನ್ನೂ ಓದಿ: ನಾನ್ಯಾಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ?: ಡಿಕೆಶಿ ಗರಂ

ನಾಳೆ ಮತ್ತೊಮ್ಮೆ ಎಐಸಿಸಿ ಸಭೆ ನಡೆಸಲಿದೆ. ನಾಳೆಯೇ ಸೋನಿಯಾ ಗಾಂಧಿ ಶಿಮ್ಲಾದಿಂದ ದೆಹಲಿಗೆ ವಾಪಸ್ ಆಗುವ ಸಂಭವ ಇದೆ. ಹೀಗಾಗಿ ನಾಳೆ ಸಿಎಂ ಆಯ್ಕೆ ಕಗ್ಗಂಟು ಬಗೆಹರಿಯಬಹುದು ಎಂದು ಹೇಳಲಾಗುತ್ತಿದೆ. ನಾಳೆ ಸಂಜೆ ಅಥವಾ ನಾಳಿದ್ದು ಬೆಂಗಳೂರಿನಲ್ಲಿ ಸಿಎಲ್‌ಪಿ ಸಭೆ ಕರೆದು, ನೂತನ ಸಿಎಂ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಯಾರಾಗ್ತಾರೆ ಸಿಎಂ ಎಂಬ ಕುತೂಹಲ ಮುಂದುವರಿದಿದೆ.

Share This Article