ಚೆನ್ನೈ: ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಘಟನೆಯೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಗಮನ ಸೆಳೆದಿದೆ.
ಹೌದು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ (NEET Exam) ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಮಾಡುವ ಮುನ್ನ ಒತ್ತಾಯವಾಗಿ ವಿದ್ಯಾರ್ಥಿನಿಯರ ಒಳಉಡುಪು ಕಳಚಿಸಿರುವ ವಿಚಾರವೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಚೆನ್ನೈನ ಮೈಲಾಪುರದಲ್ಲಿ ನೀಟ್ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಹಾಲ್‍ಗೆ ಪ್ರವೇಶಿಸುವ ಮೊದಲು ಅವಳ ಒಳಉಡುಪುಗಳನ್ನು ತೆಗೆಯುವಂತೆ ಹೇಳಲಾಗಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನೀಟ್ ಅಥವಾ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯು ಭಾರತದಲ್ಲಿ ವೈದ್ಯಕೀಯ ಅಧ್ಯಯನವನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ನಡೆಯುವ ಪ್ರವೇಶ ಪರೀಕ್ಷೆಯಾಗಿದೆ. ಈ ಪರೀಕ್ಷೆಯು ಹೆಚ್ಚು ಸ್ಪರ್ಧಾತ್ಮಕವಾಗಿದ್ದು, ಹೀಗಾಗಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಪಡೆಯಲು ವಿದ್ಯಾರ್ಥಿಗಳು ತಿಂಗಳುಗಳಿಂದಲೇ ತಯಾರಿ ನಡೆಸುತ್ತಾರೆ. ಆದರೆ ಇದೀಗ ಮೈಲಾಪುರದಲ್ಲಿ ನಡೆದ ಘಟನೆಯು ಈ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿನಿಯರು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸಿದೆ. ಇದನ್ನೂ ಓದಿ: UPನಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರಸಾರಕ್ಕೆ ತೆರಿಗೆ ವಿನಾಯ್ತಿ – ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಸಿಎಂ ಯೋಗಿ
ಮೆಟಲ್ ಡಿಟೆಕ್ಟರ್ (Metal Detector) ಇರುವುದರಿಂದ ಪರೀಕ್ಷಾ ಹಾಲ್‍ಗೆ ಪ್ರವೇಶಿಸುವ ಮುನ್ನ ತನ್ನ ಬ್ರಾ ಹಾಗೂ ನಿಕ್ಕರ್ ತೆಗೆಯುವಂತೆ ವಿದ್ಯಾರ್ಥಿನಿಗೆ ಹೇಳಲಾಗಿದೆ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ಸ್ವೀಕರಿಸಿರುವ ಪೊಲೀಸರು ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಪರೀಕ್ಷೆಗಳಿಗೆ ಹಾಜರಾಗುವಾಗ ವಿದ್ಯಾರ್ಥಿನಿಯರು ಎದುರಿಸುವ ತೊಂದರೆಗಳನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಈ ಘಟನೆಯು ಪರೀಕ್ಷಾ ಕೇಂದ್ರಗಳಲ್ಲಿ, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಅಸಮರ್ಪಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಬೆಳಕಿಗೆ ತಂದಿದೆ ಎಂದು ಕಿಡಿಕಾರಿದ್ದಾರೆ.